Home Blog ಸುಳ್ಳು ಶಾಸಕರ ಮನೆ ದೇವರು ಎಂದು ಹರಿಹಾಯ್ದ ಹರತಾಳು ಹಾಲಪ್ಪ..!!

ಸುಳ್ಳು ಶಾಸಕರ ಮನೆ ದೇವರು ಎಂದು ಹರಿಹಾಯ್ದ ಹರತಾಳು ಹಾಲಪ್ಪ..!!

33
0

ಸಾಗರ: ಅವೈಜ್ಞಾನಿಕ ಗ್ರಾಮ ಪಂಚಾಯಿತಿ ಮೀಸಲಾತಿ, ಬೆಳೆವಿಮೆ ವಿತರಣೆ ಹಾಗೂ ಹಾಳಾಗಿರುವ ಮಳೆಮಾಪನ ಯಂತ್ರಗಳ ದುರಸ್ತಿಗೆ ಆಗ್ರಹಿಸಿ ಬಿಜೆಪಿ ವತಿಯಿಂದ ಗುರುವಾರ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಶಾಸಕ ಬೇಳೂರಿಗೆ ಸುಳ್ಳು ಮನೆ ದೇವರಾಗಿದೆ. ಮಂತ್ರಿಯಾಗಲೂ ನಗರಸಭೆಯ ಬಾವಿ ಮುಚ್ಚಿಸಿದ್ದರು. ಸತ್ಯಕ್ಕಿಂತ ಸುಳ್ಳು ಹೇಳುವುದೇ ಹೆಚ್ಚು” ಎಂದು ಟೀಕಿಸಿದರು.

ಎರಡು ವರ್ಷಗಳ ಹಿಂದೆ ತಾಲೂಕು ಆಸ್ಪತ್ರೆ ಅಭಿವೃದ್ಧಿಗೆ ₹70 ಕೋಟಿ ಮಂಜೂರಾಗಿದೆ ಎಂದು ಶಾಸಕ ಬೇಳೂರು ಹೇಳಿದ್ದರು. ಆ ಅನುದಾನ ಎಲ್ಲಿಗೆ ಹೋಗಿದೆ ಎಂಬುದನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು.

ತಾಲೂಕಿನ ಆಡಳಿತ ವ್ಯವಸ್ಥೆ ಸಂಪೂರ್ಣ ಅವ್ಯವಸ್ಥೆಯತ್ತ ಸಾಗುತ್ತಿದೆ ಎಂದು ಆರೋಪಿಸಿದ ಅವರು, 36 ಮಳೆಮಾಪನ ಕೇಂದ್ರಗಳ ಪೈಕಿ 13 ಕೇಂದ್ರಗಳು ಹಾಳಾಗಿದ್ದು, ಇದುವರೆಗೆ ದುರಸ್ತಿ ಮಾಡದ ಕಾರಣ ರೈತರಿಗೆ ಬೆಳೆಹಾನಿ ಪರಿಹಾರ ಪಡೆಯಲು ತೊಂದರೆಯಾಗುತ್ತಿದೆ ಎಂದರು. ಕಳೆದ ವರ್ಷ ಅಧಿಕ ಮಳೆಯಿಂದ ಬೆಳೆ ಹಾನಿಯಾಗಿದ್ದು, ಈ ವರ್ಷ ಆರಂಭದಲ್ಲಿ ಮಳೆ ಕೊರತೆ ಇದ್ದು ನಂತರ ಅಧಿಕ ಮಳೆಯಾಗಿದೆ. ಆದರೆ ಮಳೆ ದಾಖಲೆ ಮಾಡುವ ವ್ಯವಸ್ಥೆಯೇ ಸಮರ್ಪಕವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಈ ಸಮಸ್ಯೆಗಳ ಅರಿವು ಇಲ್ಲ ಎಂದು ಟೀಕಿಸಿದ ಹರತಾಳು ಹಾಲಪ್ಪ, ಬಂಗಾರಪ್ಪ ಅವರ ಹೆಸರನ್ನು ಹೇಳಿಕೊಳ್ಳುವವರು ಅಭಿವೃದ್ಧಿ ಕಾರ್ಯಗಳ ಮೂಲಕ ಅವರ ಪರಂಪರೆಯನ್ನು ಉಳಿಸಬೇಕೇ ಹೊರತು ರಾಜಕೀಯ ಹೇಳಿಕೆಗಳಿಂದಲ್ಲ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಮೀಸಲಾತಿ ಕಾಂಗ್ರೆಸ್ ಪಕ್ಷದ ಕೆಲವರ ಪ್ರಭಾವದಲ್ಲಿ ರೂಪುಗೊಂಡಿದ್ದು, ಅರ್ಹ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಬೆಳೆವಿಮೆ ಪರಿಹಾರದ ಪ್ರಮಾಣವೂ ಅತ್ಯಂತ ಕಡಿಮೆಯಾಗಿದೆ ಎಂದು ಹೇಳಿದ ಅವರು, ಒಂದು ಅಡಿಕೆ ಸಸಿಯ ಬೆಲೆ ₹70 ಇದ್ದರೆ, ಗಾಳಿ-ಮಳೆಯಿಂದ ಮರ ಮುರಿದು ಬಿದ್ದಾಗ ಕೇವಲ ₹17 ಪರಿಹಾರ ನೀಡಲಾಗುತ್ತಿದೆ. ಈ ಬಗ್ಗೆ ಶಾಸಕರು ವಿಧಾನಸೌಧದಲ್ಲಿ ಧ್ವನಿ ಎತ್ತಬೇಕಿತ್ತು ಎಂದು ಹೇಳಿದರು.

ಸಚಿವ ಸ್ಥಾನಕ್ಕಾಗಿ ₹20 ಕೋಟಿ ನೀಡಲಾಗಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ ಎಂದು ಹೇಳಿದ ಅವರು, ಸಚಿವ ಸ್ಥಾನಕ್ಕಾಗಿ ಓಡಾಟ ನಡೆಸುವ ಬದಲು ಕ್ಷೇತ್ರದ ಅಭಿವೃದ್ಧಿ ಮತ್ತು ರೈತರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಜೊತೆಗೆ ಬೆಳೆವಿಮೆ ಸಮರ್ಪಕವಾಗಿ ವಿತರಣೆ ಮಾಡಬೇಕು ಹಾಗೂ ಹಾಳಾಗಿರುವ ಮಳೆಮಾಪನ ಯಂತ್ರಗಳನ್ನು ತಕ್ಷಣ ದುರಸ್ತಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಾಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ, ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಧುರಾ ಶಿವಾನಂದ್, ದಿಶಾ ಸಮಿತಿ ಸದಸ್ಯೆ ಸುವರ್ಣ ಟೀಕಪ್ಪ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.

ಪ್ರತಿಭಟನೆಯಲ್ಲಿ ದೇವೇಂದ್ರಪ್ಪ ಯಲಕುಂದಿ, ಗಣೇಶ್ ಪ್ರಸಾದ್, ಗಾಯತ್ರಿ ಮಲ್ಲೇಶಪ್ಪ, ರೂಪಾ, ಮೈತ್ರಿ ಪಾಟೀಲ್, ಸವಿತಾ ವಾಸು, ಪ್ರೇಮ್ ಸಿಂಗ್, ವಿ. ಮಹೇಶ್, ಶ್ರೀನಿವಾಸ್ ಮೇಸ್ತಿ, ಹರೀಶ್ ಮೂಡಳ್ಳಿ, ಅರುಣ ಕುಗೈ, ಬಿ.ಟಿ. ರವೀಂದ್ರ, ಪರಶುರಾಮ್, ಸತೀಶ್ ಕೆ., ಪ್ರಶಾಂತ್ ಕೆ.ಎಸ್., ರಾಯಲ್ ಸಂತೋಷ್, ಕೃಷ್ಣ ಶೆಟ್ಟಿ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಜಾಹೀರಾತು