ಶಿವಮೊಗ್ಗ: ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ತಾತ್ವಿಕ ನಿಲುವುಗಳನ್ನು ಒಂದೇ ದೃಷ್ಟಿಕೋನದಲ್ಲಿ ಅರ್ಥೈಸಿ ಯುವಜನತೆಗೆ ಪರಿಚಯಿಸುವುದು ಅಗತ್ಯ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಪ್ರಹ್ಲಾದಪ್ಪ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಕೋಶ (IQAC) ಹಾಗೂ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಸೋಮವಾರ (03-08-2026) ಆಯೋಜಿಸಿದ್ದ “ಮಹಾತ್ಮ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ತಾತ್ವಿಕ ನಿಲುವುಗಳು” ವಿಷಯದ ವಿಚಾರ ಸಂಕೀರ್ಣದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಮಹಾತ್ಮ ಗಾಂಧೀಜಿ ಶಾಂತಿ, ಅಹಿಂಸೆ ಹಾಗೂ ಸಾಮಾಜಿಕ ಕಳಕಳಿಯ ಮೌಲ್ಯಗಳನ್ನು ಜಗತ್ತಿಗೆ ನೀಡಿದ ಮಹಾನ್ ನಾಯಕರೆಂದರು. ಗಾಂಧೀಜಿ ಪ್ರತಿಪಾದಿಸಿದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆ ಭಾರತಕ್ಕೆ ಆದರ್ಶ ದೃಷ್ಟಿಕೋನವಾಗಿದೆ ಎಂದು ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಪರ ಹೋರಾಡಿದ ಮಹಾನ್ ನಾಯಕರು. ಮಹಿಳೆಯರು ಹಾಗೂ ಶೋಷಿತ ವರ್ಗಗಳ ಹಕ್ಕುಗಳ ರಕ್ಷಣೆಗೆ ಸಂವಿಧಾನಾತ್ಮಕ ಮತ್ತು ಕಾನೂನಾತ್ಮಕ ಭದ್ರತೆ ಒದಗಿಸಿದ ಧೀಮಂತ ವ್ಯಕ್ತಿತ್ವವಾಗಿದ್ದಾರೆ. ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸಮಗ್ರವಾಗಿ ಅರ್ಥೈಸಿ ಯುವಜನತೆಗೆ ತಿಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಂಗನಾಥ್ ಕರಾಡ್ ವಹಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಜಗದೀಶ್ ಬಿದರಕೊಪ್ಪ ಪ್ರಾಸ್ತಾವಿಕ ನುಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಕೋಶದ ಸಂಚಾಲಕರಾದ ಡಾ. ನವೀನ್ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವರದರಾಜ ಉಪಸ್ಥಿತರಿದ್ದರು. ಅಂತಿಮ ಬಿ.ಎ. ವಿದ್ಯಾರ್ಥಿನಿ ಸಿಂಚನಾ ಕಾರ್ಯಕ್ರಮ ನಿರೂಪಿಸಿದರು. ಪ್ರಥಮ ಬಿ.ಎ. ವಿದ್ಯಾರ್ಥಿನಿ ಕೀರ್ತನಾ ಸ್ವಾಗತಿಸಿದರು. ಅಂತಿಮ ಬಿ.ಎ. ವಿದ್ಯಾರ್ಥಿನಿ ಪ್ರಿಯಾಂಕ ವಂದನಾರ್ಪಣೆ ಸಲ್ಲಿಸಿದರು.
ಜಾಹೀರಾತು












