Home Blog ತಹಸಿಲ್ದಾರ್ ಅಕ್ರಮ ಗಣಿಗಾರಿಕೆ ಮೇಲೆ ದಿಢೀರ್ ದಾಳಿ; ಕಾರ್ಮಿಕರು ಎಸ್ಕೇಪ್, ಜೆಸಿಬಿ ಮುಟ್ಟುಗೋಲು..!!

ತಹಸಿಲ್ದಾರ್ ಅಕ್ರಮ ಗಣಿಗಾರಿಕೆ ಮೇಲೆ ದಿಢೀರ್ ದಾಳಿ; ಕಾರ್ಮಿಕರು ಎಸ್ಕೇಪ್, ಜೆಸಿಬಿ ಮುಟ್ಟುಗೋಲು..!!

31
0

✒️..ಅಮಿತ್ ಆರ್ ಆನಂದಪುರ

ಸಾಗರ: ತಾಲೂಕಿನ ತಾಳಗುಪ್ಪ ಹೋಬಳಿಯ ಕಾನ್ಲೆ ಗ್ರಾಮದ ಸರ್ವೆ ನಂಬರ್ 123ರಲ್ಲಿ ನಡೆಯುತ್ತಿದ್ದ ಅಕ್ರಮ ಜಂಬಿಟ್ಟಿಗೆ ಕಲ್ಲು ಗಣಿಗಾರಿಕೆ ಮೇಲೆ ತಹಶೀಲ್ದಾರ್ ಡಾ. ಪ್ರತಿಭಾ ಆರ್. ದಿಢೀರ್ ದಾಳಿ ನಡೆಸಿ, ಜೆಸಿಬಿಯನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಸಾರ್ವಜನಿಕರಿಂದ ಬಂದ ದೂರಿನ ಆಧಾರದ ಮೇಲೆ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು ಕಾನ್ಲೆ ಗ್ರಾಮದ ಹಿಡುವಳಿ ಜಮೀನಿನಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಕ್ವಾರಿಗೆ ದಾಳಿ ನಡೆಸಿದರು. ಅಧಿಕಾರಿಗಳ ಜೀಪ್ ಬರುತ್ತಿರುವುದನ್ನು ಕಂಡ ಏಳು–ಎಂಟು ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಪರಾರಿಯಾಗುತ್ತಿದ್ದ ಜೆಸಿಬಿಯನ್ನು ಬೆನ್ನಟ್ಟಿ ತಡೆದು ವಶಕ್ಕೆ ಪಡೆಯುವಲ್ಲಿ ತಹಶೀಲ್ದಾರ್ ಯಶಸ್ವಿಯಾಗಿದ್ದಾರೆ.

ಅಕ್ರಮ ಗಣಿಗಾರಿಕೆಗೆ ಕಡಿವಾಣ

ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು ಸಾಗರ ತಾಲೂಕಿನಲ್ಲಿ ಕರ್ತವ್ಯಕ್ಕೆ ಹಾಜರಾದ ಬಳಿಕ ಅಕ್ರಮ ಕಲ್ಲು ಮತ್ತು ಮರಳು ಗಣಿಗಾರಿಕೆ ವಿರುದ್ಧ ನಿರಂತರ ದಾಳಿ ನಡೆಸುತ್ತಿದ್ದು, ಹಲವು ಪ್ರಕರಣಗಳಲ್ಲಿ ಯಂತ್ರೋಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೂ ತಾಲೂಕಿನ ವಿವಿಧೆಡೆ ಅಕ್ರಮ ಗಣಿಗಾರಿಕೆ ಮುಂದುವರಿಯುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ದಾಳಿಯ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿ ಎಂ.ಜಿ. ನಾಯಕ್ ಉಪಸ್ಥಿತರಿದ್ದರು.

ರಸ್ತೆ ಹಾಳಾಗುತ್ತಿದೆ; ದಂಧೆಗೆ ಬ್ರೇಕ್ ಹಾಕಲು ಒತ್ತಾಯ

ಅಕ್ರಮ ಕಲ್ಲು ಗಣಿಗಾರಿಕೆಯಿಂದ ಕಲ್ಲು ಸಾಗಿಸುವ ಭಾರೀ ಲಾರಿಗಳ ಸಂಚಾರ ಹೆಚ್ಚಾಗಿದ್ದು, ಮಳೆಗಾಲದಲ್ಲಿ ಗ್ರಾಮೀಣ ರಸ್ತೆಗಳು ಹದಗೆಡುತ್ತಿವೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.

“ಅಕ್ರಮ ಗಣಿಗಾರಿಕೆಗೆ ತಾಲೂಕು ಆಡಳಿತ ಸಹಿಸುವುದಿಲ್ಲ”

ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು, “ಸಾಗರ ತಾಲೂಕಿನಲ್ಲಿ ಹಲವು ಕಡೆ ಅಕ್ರಮ ಕಲ್ಲು ಮತ್ತು ಮರಳು ಗಣಿಗಾರಿಕೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ತಾಲೂಕು ಆಡಳಿತದಿಂದ ನಿರಂತರವಾಗಿ ದಿಢೀರ್ ದಾಳಿ ನಡೆಸಿ ಅಕ್ರಮಕ್ಕೆ ಕಡಿವಾಣ ಹಾಕಲಾಗುತ್ತಿದೆ. ಅಕ್ರಮ ಗಣಿಗಾರಿಕೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ತಾಲೂಕು ಆಡಳಿತ ಇಂತಹ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.