Home Shivamogga Sagara ‘ಗುರುಗಳಿಗೆ ಗೌರವ ಎಲ್ಲಿ?’ ಶಾಸಕ ಬೇಳೂರು ವಿರುದ್ಧ ರತ್ನಾಕರ ಹೊನಗೋಡು ಗರಂ..!!

‘ಗುರುಗಳಿಗೆ ಗೌರವ ಎಲ್ಲಿ?’ ಶಾಸಕ ಬೇಳೂರು ವಿರುದ್ಧ ರತ್ನಾಕರ ಹೊನಗೋಡು ಗರಂ..!!

18
0

✒️..ಅಮಿತ್ ಆರ್ ಆನಂದಪುರ

ಸಾಗರ(ಆನಂದಪುರ): ತಾಲೂಕಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಭಾಗಿಯಾಗದೆ ಶಿಕ್ಷಕರಿಗೆ ಅಗೌರವ ತೋರಿಸಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ ಹೊನಗೋಡು ವಾಗ್ದಾಳಿ ನಡೆಸಿ, ಈ ಕುರಿತು ಶಾಸಕರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶಾದ್ಯಂತ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಶಿಕ್ಷಕರಾಗಿ ಭಾರತ ರಾಷ್ಟ್ರಪತಿ ಸ್ಥಾನಕ್ಕೇರಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದರು.

ದೇಶದ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆ ಹೊತ್ತಿರುವ ಶಿಕ್ಷಕರ ದಿನಾಚರಣೆಯನ್ನು ತಾಲೂಕಿನಲ್ಲಿ ಆಚರಿಸುತ್ತಿದ್ದರೂ ಶಾಸಕ ಗೋಪಾಲಕೃಷ್ಣ ಬೇಳೂರು ನಿರ್ಲಕ್ಷ್ಯ ತೋರಿದ್ದಾರೆ. ಶಿಕ್ಷಕರ ದಿನಾಚರಣೆಯಲ್ಲಿ ಭಾಗಿಯಾಗದೆ ಶಿಕ್ಷಕರಿಗೆ ಅಗೌರವ ತೋರಿಸಿದ್ದಾರೆ ಎಂದು ಆರೋಪಿಸಿದರು.

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರನ್ನು ಗೌರವಿಸಿ, ಅವರ ಸೇವೆಯನ್ನು ಸ್ಮರಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಆದರೆ ಶಾಸಕರು ಅಧಿಕಾರ, ಹಣ ಮತ್ತು ಪ್ರಚಾರದಲ್ಲಿ ಮುಳುಗಿ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಾಸ್ತು ವಿಚಾರ ಪ್ರಸ್ತಾಪ

ವಾಸ್ತು ಸರಿ ಇಲ್ಲ ಎಂಬ ಕಾರಣಕ್ಕೆ ಶಾಸಕರು ಬಾವಿಯನ್ನು ಮುಚ್ಚಿಸಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ಸಮರ್ಥಿಸಿಕೊಳ್ಳುವ ನೆಪದಲ್ಲಿ ಮತ್ತಷ್ಟು ತಪ್ಪುಗಳನ್ನು ಮಾಡಬಾರದು ಎಂದು ಅವರು ಹೇಳಿದರು.

“ಯೋಗ ಮತ್ತು ಯೋಗ್ಯತೆ ಕೆಲವೊಮ್ಮೆ ವಿರುದ್ಧ ಫಲ ನೀಡುತ್ತವೆ. ಯೋಗ್ಯತೆ ಇರುವವರು ಸೋಲಬಹುದು, ಯೋಗ ಇರುವವರು ಗೆಲ್ಲಬಹುದು. ಆದರೆ ಎಲ್ಲ ಸಮಯದಲ್ಲೂ ಯೋಗ ಕೈಹಿಡಿಯುವುದಿಲ್ಲ” ಎಂದು ವ್ಯಂಗ್ಯವಾಡಿದರು.

ತಹಸೀಲ್ದಾರ್ ಅವರ ಉತ್ತಮ ಕಾರ್ಯವೈಖರಿಯ ವಿರುದ್ಧ ಶಾಸಕರು ಸಭೆಯಲ್ಲಿ ಅಗೌರವ ತೋರಿಸಿರುವುದು ಸರಿಯಲ್ಲ. ಅಧಿಕಾರಿಗಳ ಉತ್ತಮ ಕೆಲಸಗಳಿಗೆ ಜನಪ್ರತಿನಿಧಿಗಳು ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳಿಂದ ಕಲೆಕ್ಷನ್ ಆರೋಪ

“ನಾನು ಮಂತ್ರಿಯಾದ ಬಳಿಕ ಅಧಿಕಾರಿಗಳಿಗೆ ಉತ್ತಮ ಸ್ಥಾನಮಾನ ನೀಡುತ್ತೇನೆ” ಎಂದು ಹೇಳಿಕೊಂಡು ಅಧಿಕಾರಿಗಳಿಂದ ಕಲೆಕ್ಷನ್ ಮಾಡಿಕೊಂಡು ಹೋಗಿದ್ದಾರೆ. ಆದರೆ ಇದೀಗ ಸಚಿವ ಸ್ಥಾನವೂ ಇಲ್ಲದೆ, ಅಧಿಕಾರಿಗಳು ನೀಡಿದ ಹಣವೂ ತಮ್ಮ ಕೈ ಸೇರದೆ ಪರಿತಪಿಸುವ ಸ್ಥಿತಿ ಎದುರಾಗಿದೆ ಎಂದು ರತ್ನಾಕರ ಹೊನಗೋಡು ಆರೋಪಿಸಿದರು.

ಶಿಕ್ಷಕರಾಗಿ ಖಂಡನೆ

ನಿವೃತ್ತ ಮುಖ್ಯ ಶಿಕ್ಷಕ ನಾರಾಯಣಪ್ಪ ಮಾತನಾಡಿ, ತಾಲೂಕಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಇದೇ ಜಿಲ್ಲೆಯಲ್ಲಿದ್ದರೂ ಕಾರ್ಯಕ್ರಮಕ್ಕೆ ಆಗಮಿಸದೆ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಆರೋಪಿಸಿದರು.

ಭವಿಷ್ಯದ ಉತ್ತಮ ಪ್ರಜೆಗಳನ್ನು ರೂಪಿಸುವ ಶಿಕ್ಷಕರನ್ನು ಗೌರವಿಸುವ ದಿನದಂದು ಶಾಸಕರು ಈ ರೀತಿ ನಡೆದುಕೊಂಡಿರುವುದನ್ನು ನಿವೃತ್ತ ಶಿಕ್ಷಕನಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆನಂದಪುರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪ ಗೌಡ್ರು, ಮಾಜಿ ಗ್ರಾ.ಪಂ ಅಧ್ಯಕ್ಷ ಗುರುರಾಜ್ ಹಾಗೂ ನಿವೃತ್ತ ಶಿಕ್ಷಕ ಗಣಪತಪ್ಪ ನಂದಿತಳೆ ಉಪಸ್ಥಿತರಿದ್ದರು.