✒️..ಅಮಿತ್ ಆರ್ ಆನಂದಪುರ
ಆನಂದಪುರ:ದೇಶಾದ್ಯಂತ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುತ್ತಿದ್ದರೆ, ಮಂತ್ರಿಗಿರಿ ಆಸೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ದೆಹಲಿಗೆ ಹೋಗಿ ಕುಳಿತು ತಮ್ಮ ತಾಲೂಕಿನಲ್ಲಿ ಅಂಬೇಡ್ಕರ್ ಜಯಂತಿಗೆ ಹಾಜರಾಗದೆ ನಿರ್ಲಕ್ಷ ತೋರಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಬಲವಾಗಿ ಖಂಡಿಸಿದರು.
ಇವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕರಾದವರಿಗೆ ಅವರದೇ ಆದ ಸ್ಥಾನಮಾನಗಳಿರುತ್ತವೆ. ಮೂರು ಬಾರಿ ಶಾಸಕರಾಗಿರುವ ಗೋಪಾಲಕೃಷ್ಣ ಬೇಳೂರು ಅವರಿಗೆ ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಸ್ವಲ್ಪವೂ ಅರಿವಿಲ್ಲ. ಬೇರೆ ಕಾರ್ಯಗಳಿದ್ದರೆ ವಿಮಾನದ ಮೂಲಕ ದೆಹಲಿಯಿಂದ ಬೇಗ ಬರುತ್ತಾರೆ, ಆದರೆ ಅಂಬೇಡ್ಕರ್ ಜಯಂತಿಗೆ ನಿರ್ಲಕ್ಷ ತೋರಿ ಬರದೇ ಇರುವುದನ್ನು ಖಂಡಿಸಿದರು.

ತಾಲೂಕು ಆಡಳಿತ ಪೂರ್ಣ ಪ್ರಮಾಣದಲ್ಲಿ ಹದಗೆಟ್ಟಿದೆ. ಜನಸಾಮಾನ್ಯರು ಯಾವುದೇ ಇಲಾಖೆಗೆ ಹೋದರೂ ಹಣ ಕೊಡದೆ ಕೆಲಸ ಮಾಡಿಸಿಕೊಳ್ಳುವುದು ಕಷ್ಟವಾಗಿದೆ. ಶಾಸಕರು ಹಣ, ಆಸ್ತಿ ಮತ್ತು ವರ್ಗಾವಣೆಯಲ್ಲಿ ಹಣ ಸಂಪಾದಿಸುವುದರಲ್ಲೇ ಮುಳುಗಿ ಹೋಗಿದ್ದಾರೆ ಎಂದು ತೀವ್ರವಾಗಿ ಆರೋಪಿಸಿದರು.
ಹತ್ತು ವರ್ಷ ಅಧಿಕಾರ ಇಲ್ಲ, ನನ್ನ ಬಳಿ ಹಣ ಇಲ್ಲ ಎಂದು ಕಣ್ಣೀರು ಹಾಕಿ ಜನರಿಂದ ಮತ ಪಡೆದು, ಈಗ ಭ್ರಷ್ಟಾಚಾರದ ಮೂಲಕ ಆಡಳಿತ ನಡೆಸಬೇಡಿ. ನೂರು ರೂಪಾಯಿ ಪಡೆದು ಹತ್ತು ರೂಪಾಯಿ ಜನರಿಗೆ ಕೊಡುವಂತಹ ನೀತಿ ಬಿಡಬೇಕು. ನಿಮ್ಮ ದುರಾಡಳಿತ ಮತ್ತು ದುರುಂಕಾರವನ್ನು ಈಗಲೇ ಬಿಡಿ, ಇಲ್ಲವಾದರೆ ಜನರು ಮುಂದೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಎತ್ತಿಗೆ ಮೂಗು ದಾಣ ಹಾಕಿದರೆ ಮಾತ್ರ ಅದು ಬಗ್ಗುತ್ತದೆ; ನಮ್ಮ ಕ್ಷೇತ್ರವೂ ಹಾಗೆಯೇ ಆಗಿದೆ. ಈಗ ಮೂಗು ದಾಣ ತೆಗೆದ ಹೋರಿ ಆದಂತಾಗಿದೆ. ಬರುವ 2028ರ ಚುನಾವಣೆಯಲ್ಲಿ ಕ್ಷೇತ್ರದ ಜನರು ಈ ಮೂಗು ದಾಣ ತೆಗೆದು ಓಡಿಸುತ್ತಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕುರಿತು ಹಾಸ್ಯಾಸ್ಪದ ಮಾತನಾಡಿದರು.
ಶಾಸಕರು ತಾಲೂಕನ್ನು ಕುಡುಕರ ತಾಲೂಕನ್ನಾಗಿ ಮಾಡಿದ್ದಾರೆ. ಹಳ್ಳಿ ಹಳ್ಳಿಗಳಲ್ಲೂ ಮದ್ಯಪಾನ ಮಾರಾಟ ನಡೆಯುತ್ತಿದೆ. ಹಳ್ಳಿಹಳ್ಳಿಗೆ ಮದ್ಯ ಪೂರೈಸುವವರೇ ಶಾಸಕರಿಗೆ ವಿಮಾನ ಟಿಕೆಟ್ ಬುಕ್ ಮಾಡಿಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮ್ಯಾಮ್‌ಕೋಸ್ ನಿರ್ದೇಶಕ ಬರಮಪ್ಪ ಮಾತನಾಡಿ, ಅಂಬೇಡ್ಕರ್ ಅವರನ್ನು ಕಾಂಗ್ರೆಸ್ಸಿಗರು ಮೊದಲಿನಿಂದಲೂ ದೂರ ಇಡುತ್ತಾ ಬಂದಿದ್ದು, ಅದೇ ಸಂಸ್ಕೃತಿಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ರೂಢಿಸಿಕೊಂಡಿದ್ದಾರೆ. ಅಂಬೇಡ್ಕರ್ ಜಯಂತಿಗೆ ಬರದೇ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆ. ಈ ತಪ್ಪಿಗೆ ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಆನಂದಪುರ ಶಕ್ತಿ ಕೇಂದ್ರ ಅಧ್ಯಕ್ಷ ಶಾಂತಪ್ಪ ಗೌಡ್ರು, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ರೇವಪ್ಪ ಹೊಸಕೊಪ್ಪ, ರವಿಕುಮಾರ್ ಸುಬ್ರಮಣ್ಯ ಹಾಗೂ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









