Home Blog ಅಸಲಿ ಬಂಗಾರ ತೋರಿಸಿ ಲಕ್ಷ ಲಕ್ಷ ದೋಚಿದ ಗ್ಯಾಂಗ್..!!

ಅಸಲಿ ಬಂಗಾರ ತೋರಿಸಿ ಲಕ್ಷ ಲಕ್ಷ ದೋಚಿದ ಗ್ಯಾಂಗ್..!!

28
0

✒️..ಅಮಿತ್ ಆರ್ ಆನಂದಪುರ

ಸಾಗರ(ಆನಂದಪುರ): ನಿಧಿಯ ರೂಪದಲ್ಲಿ ಸಿಕ್ಕಿರುವ ಬಂಗಾರದ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ, ಮೈಸೂರು ಮೂಲದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 9.60 ಲಕ್ಷ ರೂಪಾಯಿ ನಗದು ಹಾಗೂ ಮೊಬೈಲ್‌ ಫೋನ್‌ಗಳನ್ನು ದೋಚಿ ವಂಚಿಸಿರುವ ಘಟನೆ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರಿನ ಕೆ.ಆರ್. ಪುರದ ನಿವಾಸಿ ಜಗದೀಶ್ ಜೆ. (41) ಎಂಬುವರು ವಂಚನೆಗೊಳಗಾದ ದುರ್ದೈವಿ. ಈ ಸಂಬಂಧ ಅವರು ನೀಡಿದ ದೂರಿನನ್ವಯ ಆನಂದಪುರ ಪೊಲೀಸರು ಮಂಜು ಮತ್ತು ಇತರ ಐದು ಜನ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ:

ದೂರುದಾರರಾದ ಜಗದೀಶ್ ಅವರಿಗೆ ಜೂನ್ 1, 2026 ರಂದು ಅಪರಿಚಿತ ನಂಬರ್‌ನಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ, ತನಗೆ ನಿಧಿ (ಬಂಗಾರದ ನಾಣ್ಯಗಳು) ಸಿಕ್ಕಿದ್ದು, ಅದನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿದ್ದಾನೆ. ಅಷ್ಟೇ ಅಲ್ಲದೆ, ವಿಡಿಯೋ ಕಾಲ್ ಮೂಲಕ ನಾಣ್ಯಗಳನ್ನು ತೋರಿಸಿ ಜಗದೀಶ್ ಅವರಲ್ಲಿ ವಿಶ್ವಾಸ ಮೂಡಿಸಿದ್ದಾನೆ.

ಇದನ್ನು ನಂಬಿದ ಜಗದೀಶ್ ಅವರು ಜೂನ್ 2 ರಂದು ಹರಿಹರಕ್ಕೆ ಹೋಗಿದ್ದಾರೆ. ಅಲ್ಲಿ ಇಬ್ಬರು ಆರೋಪಿಗಳು ಅವರಿಗೆ ಒಂದು ನಾಣ್ಯವನ್ನು ನೀಡಿ, ಅಸಲಿತನವನ್ನು ಪರಿಶೀಲಿಸಿಕೊಳ್ಳುವಂತೆ ತಿಳಿಸಿ ಕಳುಹಿಸಿದ್ದಾರೆ. ಜಗದೀಶ್ ಅವರು ಮೈಸೂರಿಗೆ ಮರಳಿ ನಾಣ್ಯವನ್ನು ಪರಿಶೀಲಿಸಿದಾಗ ಅದು ಅಸಲಿ ಬಂಗಾರ ಎಂದು ಖಾತರಿಯಾಗಿದೆ.

₹10 ಲಕ್ಷಕ್ಕೆ ಡೀಲ್:

ಜೂನ್ 3 ರಂದು ಮತ್ತೆ ಕರೆ ಮಾಡಿದ ಆರೋಪಿಗಳು, ಅರ್ಧ ಕೆಜಿ ಬಂಗಾರದ ನಾಣ್ಯಗಳನ್ನು ನೀಡುವುದಾಗಿ ಹೇಳಿ 10 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಹಣ ಹೊಂದಿಸಲು ಜಗದೀಶ್ ಅವರು ತಮ್ಮ ಮನೆಯ ಪೇಪರ್ ಹಾಗೂ ಶ್ಯೂರಿಟಿ ಚೆಕ್ ನೀಡಿ ಫೈನಾನ್ಸ್ ಒಂದರಲ್ಲಿ 10 ಲಕ್ಷ ರೂ. ಸಾಲ ಪಡೆದಿದ್ದಾರೆ.

ಬಳಿಕ ಜೂನ್ 4 ರಂದು ಬೆಳಗಿನ ಜಾವ ಜಗದೀಶ್ ಅವರು ತಮ್ಮ ಅಳಿಯ ಮನೋಜ ಹಾಗೂ ಕಾರ್ ಡ್ರೈವರ್ ರೋಹಿತ್ ಸಿಂಗ್ ಅವರೊಂದಿಗೆ ಕಾರಿನಲ್ಲಿ ಸಾಗರ ತಾಲೂಕಿನ ಜೋಗಿನಗದ್ದೆ ಎಂಬ ಹಳ್ಳಿಗೆ ಬಂದಿದ್ದಾರೆ. ಅಲ್ಲಿ ಆರೋಪಿಗಳಾದ ಮಂಜು ಮತ್ತು ಆತನ ಸಹಚರ ಹಣವನ್ನು ಪರಿಶೀಲಿಸುತ್ತಿದ್ದಾಗ ದಿಢೀರ್ ನಾಟಕೀಯ ತಿರುವು ಪಡೆದುಕೊಂಡಿದೆ.

ಪೊಲೀಸರ ಸೋಗಿನಲ್ಲಿ ಬೆದರಿಕೆ – ಹಣ ಲೂಟಿ:

ವ್ಯವಹಾರ ನಡೆಯುತ್ತಿದ್ದ ಸ್ಥಳಕ್ಕೆ ಇದ್ದಕ್ಕಿದ್ದಂತೆ ಎರಡು ಬೈಕ್‌ಗಳಲ್ಲಿ ನಾಲ್ವರು ಅಪರಿಚಿತರು ಬಂದಿದ್ದಾರೆ. ಅವರು ಜಗದೀಶ್ ಹಾಗೂ ಅವರ ತಂಡವನ್ನು ತರಾಟೆಗೆ ತೆಗೆದುಕೊಂಡು, “ನೀವು ಯಾವ ಊರು? ಇಲ್ಲಿ ಸ್ಮಗ್ಲಿಂಗ್ ಮಾಡುತ್ತಿದ್ದೀರಾ? ಗಾಂಜಾ ಮಾರುತ್ತಿದ್ದೀರಾ?” ಎಂದು ಜೋರಾಗಿ ಗದರಿಸಿದ್ದಾರೆ.
ಈ ವೇಳೆ ಅಲ್ಲಿದ್ದ ಮೊದಲ ಇಬ್ಬರು ಆರೋಪಿಗಳು “ಯಾರೋ ಬಂದರು, ಓಡಿ ಹೋಗಿ” ಎಂದು ಹೇಳಿ ಜಗದೀಶ್ ಅವರ ಕೈಯಲ್ಲಿದ್ದ ₹9,60,000 ನಗದು ಹಣದ ಬ್ಯಾಗ್ ಹಾಗೂ ನಾಣ್ಯದ ಬ್ಯಾಗ್‌ಅನ್ನು ಕಸಿದುಕೊಂಡು ಓಡಿಹೋಗಿದ್ದಾರೆ. ಅಷ್ಟೇ ಅಲ್ಲದೆ, ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಮನೋಜನ ಫೋನ್ ಹಾಗೂ ಜಗದೀಶ್ ಅವರ ಫೋನ್‌ಗಳನ್ನು ಉಳಿದವರು ಕಿತ್ತುಕೊಂಡು ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ.

ಪೊಲೀಸರಿಂದ ತನಿಖೆ:

ಈ ಕುರಿತು ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಪ್ರವೀಣ್ ನೇತೃತ್ವದ ತಂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.