✒️..ಅಮಿತ್ ಆರ್ ಆನಂದಪುರ
ಸಾಗರ:ಶರಾವತಿ ಎಡದಂಡೆಯಲ್ಲಿ ಎಂಪಿಎಂ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಆಕ್ರಮ ಚಟುವಟಿಕೆಗಳು ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆರೋಪಗಳು ಕೇಳಿ ಬಂದರೂ ಸಂಬಂಧಪಟ್ಟ ಅಧಿಕಾರಿಗಳು ಮೌನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕರೂರು ಹೋಬಳಿಯ ತುಮರಿ ಮದ್ಯದ ಅಂಗಡಿಯಲ್ಲಿ ಎಂಪಿಎಂ ವಾಹನದಲ್ಲಿ ತೆರಳಿ ಮದ್ಯ ಖರೀದಿಸುತ್ತಿರುವುದು ಕಂಡುಬಂದಿದೆ. ಪ್ರಶ್ನಿಸಿದ ಸ್ಥಳಿಯರಿಗೆ ಆವಾಜ್ ಹಾಕಿರುವ ಘಟನೆ ವರದಿಯಾಗಿದೆ. ಇದರಿಂದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಟೆ ನಿಗ್ರಹ ಶಿಬಿರದಲ್ಲಿ ವಿದ್ಯುತ್ ಕಳ್ಳತನ
ಕಾರ್ಗಲ್ ವನ್ಯಜೀವಿ ವಿಭಾಗದ ಅಂಬಾರಗೋಡ್ಲು ಬೇಟೆ ನಿಗ್ರಹ ಶಿಬಿರದಲ್ಲಿ ಆಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಆರೋಪ ಸಹ ಕೇಳಿ ಬಂದಿದೆ. ಸ್ಥಳಿಯರು ಪ್ರಶ್ನಿಸಿದ ನಂತರ ದಂಡ ವಿಧಿಸಿ, ಹೊಸ ವಿದ್ಯುತ್ ಮೀಟರ್ ಆಳವಡಿಸಲಾಗಿದೆ ಎಂದು ಆವಿನಹಳ್ಳಿ ಮೇಸ್ಕಾಂ ಜೆಇಇ ತಿಳಿಸಿದ್ದಾರೆ.
ಶರಾವತಿ ಹಿನ್ನೀರಿನ ಪಕ್ಕದಲ್ಲಿಯೇ ಒಡೆದ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಲೋಟ, ಕುರುಕಲು ತಿಂಡಿ ಪೊಟ್ಟಣಗಳ ರಾಶಿ ರಾಶಿಯೇ ಬಿದ್ದಿದ್ದವು. ಬಾರ್‌ಗಳಲ್ಲಿ ಮದ್ಯ ಖರೀದಿಸಿ ಅರಣ್ಯ ಪ್ರವೇಶಿಸುವ ವನ್ಯಜೀವಿ ಸಿಬ್ಬಂದಿಗಳು ಶರಾವತಿ ನದಿ ದಡಗಳಲ್ಲಿ ಕುಡಿದು ಮರ, ಬಂಡೆಗಳಲ್ಲಿ ನಿದ್ದೆ ಹೋಗುವುದು ಸಾಮಾನ್ಯವಾಗಿದೆ.

ಮದ್ಯ ಸೇವನೆ ಮಾಡಿ ವಿದ್ಯುತ್ ಕಂಬಕ್ಕೆ ಡಿಕ್ಕಿ:
ಈಚೆಗೆ ವಳಗೆರೆ ಗ್ರಾಮದಲ್ಲಿ ತಡರಾತ್ರಿ ಅರಣ್ಯ ಇಲಾಖೆ ಗಸ್ತು ವಾಹನ ಡಿಕ್ಕಿ ಹೊಡೆದಿರುವುದು ಸಹ ಕುಡಿದು ವಾಹನ ಚಾಲನೆ ಮಾಡಿದ್ದರಿಂದ ಎಂಬುದು ಸ್ಥಳೀಯರ ಆರೋಪ, ಕುಡಿದ ಅಮಲಿನಲ್ಲಿ ಹಲವು ವಾಹನಗಳನ್ನು ಓವರ್ ಸ್ಪೀಡ್ ಮಾಡಿ, ಅಡ್ಡದಿಡ್ಡಿಯಾಗಿ ವಾಹನ ಚಾಲನೆ ಮಾಡಿರುವ ಬಗ್ಗೆ
ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಒಟ್ಟಾರೆ ಶರಾವತಿ ಎಡದಂಡೆಯಲ್ಲಿ ಅರಣ್ಯ ಇಲಾಖೆ ಹಾಗೂ ಎಂಪಿಎಂ ಇಲಾಖೆ ಅಧಿಕಾರಿಗಳ ಆಕ್ರಮ ಚಟುವಟಿಕೆಯಿಂದ ಅರಣ್ಯ ರಕ್ಷಣೆಗೆ ಎಟು ಬೀಳುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.














