ಶಿವಮೊಗ್ಗ ಮೇ.27; ಕಾಂಗ್ರೆಸ್ ಹೈ ಕಮಾಂಡ್ ಮುಖ್ಯಮಂತ್ರಿ ಬದಲಾವಣೆಗೆ ಮುಂದಾಗಿದ್ದು, ಇದು ಇಡೀ ದೇಶದಲ್ಲಿ ಕಾಂಗ್ರೆಸ್ ಅವನತಿಗೆ , ಮುನ್ಸೂಚನೆಯಾಗಿದೆ ಎಂದು ಬಿ.ಜೆ.ಪಿ.ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊನೆಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜ್ಯ ಸರ್ಕಾರದ ವೈಫಲ್ಯ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳನ್ನು ಬದಲಾಯಿಸಲು ಮುಂದಾಗಿದ್ದು, ಸಿದ್ದರಾಮಯ್ಯ ಬಿಟ್ಟು ಯಾರೇ ಸಿ.ಎಂ.ಆದರೂ ಅದು ತಾತ್ಕಾಲಿಕ. ಅವಧಿ ಪೂರ್ವ ಚುನಾವಣೆ ಆಗುವುದನ್ನು ತಡೆಯಲ್ಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ನಿನ್ನೆ ದೆಹಲಿಯಲ್ಲಿ 5 ಗಂಟೆಗಳ ಕಾಲ ಮ್ಯಾರಾಥಾನ್ ಸಭೆ ನಡೆದಿದೆ. ಸಭೆಯ ಕೊನೆಗೆ ಮುಖ್ಯಮಂತ್ರಿ ರಾಜಿನಾಮೆಗೆ ನಿರ್ಧಾರವಾಗಿದೆ. ಭ್ರಷ್ಟಾಚಾರದ ವೈಫಲ್ಯ ಹೊಂದಿದ ಆರೋಪವಿರುವ ಸಿದ್ದರಾಮಯ್ಯನವರ ರಾಜೀನಾಮೆಗೆ ಹೈಕಮಾಂಡ್ ಅನುಮೋದಿಸಿದೆ. ಸಿದ್ದರಾಮಯ್ಯನವರು ರಾಜೀನಾಮೆ ನೀಡಿ ಯಾರೇ ಮುಖ್ಯಮಂತ್ರಿಯಾದರೂ ಅದರ ಆಯ್ಕೆ ಅಷ್ಟು ಸಲೀಸಾಗಿ ಆಗುವುದಿಲ್ಲ. ರಾಜ್ಯ ಸರ್ಕಾರದಲ್ಲಿ ಗೊಂದಲ ಶುರುವಾಗಲಿದೆ.
ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದು ಮುಖ್ಯವಲ್ಲ ಎಂದ ಅವರು ಕೊನೆಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜ್ಯ ಸರ್ಕಾರದ ವೈಫಲ್ಯ ಒಪ್ಪಿಕೊಂಡಿದೆ. ದೇಶದಲ್ಲಿ ಕಾಂಗ್ರೆಸ್ ಅವನತಿ ಶುರುವಾಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಳಿಕ ಕರ್ನಾಟಕದಲ್ಲೂ ಕೂಡ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ ಎಂದು ತಿಳಿಸಿದರು.

ನನಗೆ ಸಿದ್ದರಾಮ್ಯನವರ ಬಗ್ಗೆ ಯಾವುದೇ ದ್ವೇಷವಿಲ್ಲ. ಆದರೆ ದಕ್ಷಿಣ ಭಾರತದಲ್ಲೇ ಇತರ ರಾಜ್ಯಗಳಿಗೆ ಹೋಲಿಸಿದರೆ ಹತ್ತು ಲಕ್ಷ ಕೋಟಿ ರೂ.ಸಾಲ ಮಾಡುವುದರ ಮೂಲಕ ಸಿದ್ದರಾಮಯ್ಯ ದಾಖಲೆ ಮುರಿದಿದ್ದಾರೆ. ಉಪ ಚುನಾವಣೆಯ ಗೆಲುವು ಅವರ ಸಾಧನೆಗೆ ಮಾನದಂಡವಲ್ಲ. ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಆಡಳಿತ ಯಂತ್ರ ಕುಸಿದಿದೆ. ಇದು ಬ್ರöಷ್ಟಾಚಾರದ ಸರ್ಕಾರವೆಂದು ಕಾಂಗ್ರೆಸ್ ಹೈಕಮಾಂಡೇ ಒಪ್ಪಿಕೊಂಡ ಹಾಗಾಗಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಬದಲು ಯಾರು ಸಿಎಂ ಆಗುತ್ತಾರೆ ಎನ್ನುವುದು ಮುಖ್ಯವಲ್ಲ. ಸಿದ್ದರಾಮಯ್ಯ ಅತಿಹೆಚ್ಚು ಅನುಭವವಿರುವ ಮುಖ್ಯಮಂತ್ರಿ. ಆದರೂ ಸಿದ್ದರಾಮಯ್ಯ ಅವಧಿಯಲ್ಲಿ ಹತ್ತು ಲಕ್ಷ ಕೋಟಿ ರೂ. ಸಾಲವಾಗಿದೆ. ಆಂತರಿಕ ಕಚ್ಚಾಟದಿಂದ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ವಾಲ್ಮೀಕಿ, ಮೂಡಾ ಹೀಗೆ ಹಲವು ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡ ಏಕೈಕ ರಾಜ್ಯ ಕರ್ನಾಟಕವಾಗಿದೆ. ಒಟ್ಟಾರೆ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದ ರಾಜ್ಯ ಸರ್ಕಾರವನ್ನು ಬದಲಾಯಿಸಲು ಕಾಂಗ್ರೆಸ್ ಹೈಕಮಾಂಡ್ ಹೊರಟಿದೆ ಎಂದು ಆರೋಪಿಸಿದ್ದಾರೆ.
















