✒️..ಅಮಿತ್ ಆರ್ ಆನಂದಪುರ
ಸಾಗರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನೇ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಜಂಟಿಯಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭೀಕರ ಘಟನೆ ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ನಾಟಕವಾಡಿದ್ದ ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
ಸಾಗರ ಟೌನ್ ಜೆ.ಪಿ ನಗರದ 2ನೇ ಕ್ರಾಸ್ ನಿವಾಸಿ, ವೃತ್ತಿಯಲ್ಲಿ ಇಸ್ತ್ರಿ ಕಾರ್ಮಿಕರಾಗಿದ್ದ ಪರಶುರಾಮ (40) ಕೊಲೆಯಾದ ದುರ್ದೈವಿ. ಇವರ ಪತ್ನಿ ಚೈತ್ರಾ ಹಾಗೂ ಮಂಜುನಾಥ ಅಲಿಯಾಸ್ ‘ಟೀ ಪುಡಿ ಮಂಜು’ ಎಂಬಾತನ ನಡುವೆ ಕಳೆದ ಕೆಲ ದಿನಗಳಿಂದ ಅಕ್ರಮ ಸಂಬಂಧವಿತ್ತು. ಈ ವಿಷಯ ಪರಶುರಾಮನಿಗೆ ತಿಳಿದು, ದಂಪತಿಗಳ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು.
ಮೇ 15ರ ಶುಕ್ರವಾರ ರಾತ್ರಿ 10:00 ಗಂಟೆಯ ಸುಮಾರಿಗೆ ದಂಪತಿಗಳ ನಡುವೆ ಲೈಂಗಿಕ ವಿಚಾರವಾಗಿ ಇದೇ ರೀತಿಯ ತೀವ್ರ ಜಗಳ ನಡೆದಿದೆ. ಈ ಸಮಯದಲ್ಲಿ ಪ್ರಿಯಕರ ಮಂಜುನಾಥ್ ಮನೆಗೆ ನುಗ್ಗಿದ್ದಾನೆ. ಮಾತಿಗೆ ಮಾತು ಬೆಳೆದು ಪರಶುರಾಮ ಮನೆಯಲ್ಲಿದ್ದ ಕುಡುಗೋಲು ಹಿಡಿದರೆ, ಮಂಜುನಾಥ್ ತನ್ನ ಕೈಯಲ್ಲಿದ್ದ ಚಾಕುವಿನಿಂದ ಪರಶುರಾಮನ ಹೊಟ್ಟೆಗೆ ಬಲವಾಗಿ ಚುಚ್ಚಿ ಕೊಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಪರಶುರಾಮನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಆತ್ಮಹತ್ಯೆ ಎಂದು ಬಿಂಬಿಸಲು ಸಂಚು:
ಕೊಲೆಯಾದ ತಕ್ಷಣ ಆರೋಪಿ ಚೈತ್ರಾ, ತನ್ನ ಪತಿ ತಾನೇ ಕುಡುಗೋಲಿನಿಂದ ಹೊಟ್ಟೆ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಂಬಂಧಿಕರಿಗೆ ಮತ್ತು ಪೊಲೀಸರಿಗೆ ಸುಳ್ಳು ಕಥೆ ಕಟ್ಟಿ ನಂಬಿಸಿದ್ದಳು. ಆರಂಭದಲ್ಲಿ ಇದನ್ನು ಯುಡಿಆರ್ (ಅನುಮಾನಾಸ್ಪದ ಸಾವು) ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.
ಪೊಲೀಸ್ ತನಿಖೆಯಲ್ಲಿ ಬಯಲಾದ ಸತ್ಯ:
ಮೃತನ ಸಾವಿನ ಬಗ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿದ ಆತನ ಅಣ್ಣ ದುರುಗಪ್ಪ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಚುರುಕುಗೊಳಿಸಿದ ಸಾಗರ ಟೌನ್ ಪಿಎಸ್ಐ ಶಾಂತರಾಜ್ ಹೆಚ್.ಜಿ ಮತ್ತು ತಂಡವು ಮೇ 24 ರಂದು ಪತ್ನಿ ಚೈತ್ರಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಆರೋಪಿ ಚೈತ್ರಾ ತನಿಖಾಧಿಕಾರಿಗಳ ಮುಂದೆ ಮತ್ತು ಸ್ಥಳ ಪಂಚನಾಮೆ ವೇಳೆ ಅಕ್ರಮ ಸಂಬಂಧ ಹಾಗೂ ಕೊಲೆಯ ಸಂಪೂರ್ಣ ಮಾಹಿತಿಯನ್ನು ಮುಚ್ಚಿಟ್ಟಿರುವುದು ಸಾಬೀತಾಗಿದೆ.
ಪ್ರಸ್ತುತ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಇಬ್ಬರನ್ನು ಬಂಧನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
















