Home Blog ಚಿರತೆ ಅಂತ್ಯ ಸಂಸ್ಕಾರ ಮಾಡಿದ ಸಾಗರದ ತಹಸಿಲ್ದಾರ್..!!

ಚಿರತೆ ಅಂತ್ಯ ಸಂಸ್ಕಾರ ಮಾಡಿದ ಸಾಗರದ ತಹಸಿಲ್ದಾರ್..!!

52
0

ಸಾಗರ: ತಾಲೂಕಿನ ಕಾರ್ಗಲ್ ವನ್ಯಜೀವಿ ವಲಯದ ಮುಪ್ಪಾಣಿ ಶಾಖೆಯ ಸಸಿ ಚೌಕ ಕಳ್ಳಬೇಟೆ ನಿಗ್ರಹ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು ನಾಲ್ಕು ತಿಂಗಳ ಚಿರತೆಮರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ತಹಶೀಲ್ದಾರ್ ಡಾ. ಪ್ರತಿಭಾ ಆರ್ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.


ಮುಪ್ಪಾಣಿ ಗಸ್ತು ವ್ಯಾಪ್ತಿಯ ಮಂಡವಳ್ಳಿ ಗ್ರಾಮದ ಸರ್ವೇ ನಂ. 44ರಲ್ಲಿರುವ ಯೋಗರಾಜ್ ಅವರ ಅಡಿಕೆ ತೋಟದ ಸಮೀಪ ಗಾಯಗೊಂಡ ಸ್ಥಿತಿಯಲ್ಲಿ ಚಿರತೆಮರಿ ಪತ್ತೆಯಾಗಿತ್ತು. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷತೆ ಹಾಗೂ ಚಿಕಿತ್ಸೆಯ ಉದ್ದೇಶದಿಂದ ಮರಿಯನ್ನು ಸಸಿ ಚೌಕ ಕಳ್ಳಬೇಟೆ ನಿಗ್ರಹ ಶಿಬಿರಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಿದ್ದರು. ಆದರೆ ಗಂಭೀರ ಗಾಯಗಳಿಂದ ಬಳಲುತ್ತಿದ್ದ ಚಿರತೆಮರಿ ಇಂದು ಬೆಳಿಗ್ಗೆ ಮೃತಪಟ್ಟಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಚಿರತೆಮರಿಯ ಬೆನ್ನಿನ ಮೂಳೆ ಹಾಗೂ ಕಾಲುಗಳು ಮುರಿದಿದ್ದವು. ಗಾಯಗಳು ತೀವ್ರಗೊಂಡು ನಂಜು ಉಂಟಾಗಿದ್ದರಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.


ಪಶುವೈದ್ಯಾಧಿಕಾರಿ ಆಕಾಶ್ ಅವರು ಮರಣೋತ್ತರ ಪರೀಕ್ಷೆ ನಡೆಸಿದರು. ಈ ವೇಳೆ ವಲಯ ಅರಣ್ಯಾಧಿಕಾರಿ ಧನಂಜಯ ನಾಯಕ್, ರೆವೆನ್ಯೂ ಇನ್ಸ್‌ಪೆಕ್ಟರ್ ಬೀರಪ್ಪ ಹಾಗೂ ಗ್ರಾಮ ಆಡಳಿತ ಅಧಿಕಾರಿ ಯಲ್ಲಾಲಿಂಗ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.


“ಕಾರ್ಗಲ್ ಅರಣ್ಯ ವಲಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸುಮಾರು ನಾಲ್ಕು ತಿಂಗಳ ಚಿರತೆಮರಿಯನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಗಂಭೀರ ಗಾಯಗಳ ಕಾರಣ ಅದು ಬದುಕುಳಿಯಲಿಲ್ಲ. ಇಂದು ಬೆಳಿಗ್ಗೆ ಸಾವನ್ನಪ್ಪಿದ ಚಿರತೆಮರಿಗೆ ಮರಣೋತ್ತರ ಪರೀಕ್ಷೆ ನಡೆಸಿ ಅಂತಿಮ ಸಂಸ್ಕಾರ ನೆರವೇರಿಸಲಾಗಿದೆ. ಗಾಯಗಳಿಂದ ಉಂಟಾದ ನಂಜು ಸಾವಿಗೆ ಕಾರಣವಾಗಿರಬಹುದು. ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಅರಣ್ಯ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ” ಎಂದು ತಹಶೀಲ್ದಾರ್ ಡಾ. ಪ್ರತಿಭಾ ಆರ್ ತಿಳಿಸಿದ್ದಾರೆ.