ಸಾಗರ/ಜಗತ್ತಿನಲ್ಲಿ ಜೈನ ಧರ್ಮವು ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ಸಾರುವ ಶ್ರೇಷ್ಠ ಧರ್ಮವಾಗಿದ್ದು, ಅದರ ತತ್ವಗಳನ್ನು ಪ್ರತಿಯೊಬ್ಬರೂ ಅನುಸರಿಸುವುದು ಅಗತ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟರು.
ಐತಿಹಾಸಿಕ ಬಿದರೂರಿನ ವರ್ಧಮಾನ ಸ್ವಾಮಿಯ ಪಂಚಕಲ್ಯಾಣ ಮಹೋತ್ಸವದ ಕೊನೆಯ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜೈನ ಧರ್ಮದ ಅಹಿಂಸಾ ತತ್ವವನ್ನು ಅಳವಡಿಸಿಕೊಂಡರೆ ಮಾತ್ರ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿ ನೆಲೆಸಲು ಸಾಧ್ಯ ಎಂದರು.
ಇಂದಿನ ಯುಗದಲ್ಲಿ ಯುವಜನತೆ ಮೊಬೈಲ್‌ಗಳಿಗೆ ಹೆಚ್ಚು ಆಕರ್ಷಿತರಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವುದು ವಿಷಾದನೀಯ. ಇಂತಹ ಸಂದರ್ಭಗಳಲ್ಲಿ ಜೈನ ಧರ್ಮದ ತತ್ವಗಳು ಮನಸ್ಸಿಗೆ ಶಾಂತಿ ನೀಡುತ್ತವೆ. ದೇಶದ ಅಭಿವೃದ್ಧಿಗೆ ಜೈನ ಧರ್ಮದ ಕೊಡುಗೆ ಅಪಾರವಾಗಿದ್ದು, ಗುರುಗಳ ಮಾರ್ಗದರ್ಶನ ಇಂದಿನ ಸಮಾಜಕ್ಕೆ ಅತ್ಯವಶ್ಯಕ ಎಂದು ಹೇಳಿದರು.

ಈ ಭಾಗದಲ್ಲಿ ಜಿನ ಮಂದಿರ ನಿರ್ಮಾಣವಾಗಿರುವುದು ಸಂತಸದ ಸಂಗತಿಯಾಗಿದೆ. ಇಂತಹ ಧಾರ್ಮಿಕ ಕೇಂದ್ರಗಳು ಜನರಿಗೆ ಆಧ್ಯಾತ್ಮಿಕ ಶಾಂತಿ ಮತ್ತು ನೆಮ್ಮದಿಯನ್ನು ಒದಗಿಸುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ್ದ ಸ್ವಾದಿ ಜೈನಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಮಂದಿರಗಳ ನಿರ್ಮಾಣವು ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ. ಮನುಷ್ಯನು ಮನುಷ್ಯತ್ವವನ್ನು ಬೆಳೆಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸದ್ಗುಣಗಳನ್ನು ಅಳವಡಿಸಿಕೊಂಡು ಇತರರಿಗೆ ಒಳಿತು ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಉಪದೇಶಿಸಿದರು.

ವೇದಿಕೆಯಲ್ಲಿ ಟಿ.ಡಿ. ಮೇಘರಾಜ್, ರಾಜಶೇಖರ್ ಗಾಳಿಪುರ, ನಾಗರಾಜ್ ಬೊಬ್ಬಿಗೆ, ಲಕ್ಷ್ಮೀನಾರಾಯಣ, ದಿನೇಶ್ ಜೈನ್ (ಬಾಂಬೆ), ಶಶಿಕಲಾ ದಿನೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಶಾಂತರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
















