✒️..ಅಮಿತ್ ಆರ್ ಆನಂದಪುರ
ಸಾಗರ: ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ರಾಜ್ಯ ಕಾಂಗ್ರೆಸ್ ನಾಯಕತ್ವದ ಮೇಲೆ ಒತ್ತಡ ಹೇರಬೇಕು ಎಂದು ಕಾಂಗ್ರೆಸ್ ಮುಖಂಡ ಲಿಂಗರಾಜ್ ಗೇರುಬೀಸು ಆಗ್ರಹಿಸಿದರು.
ಅವರು ಆನಂದಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗೋಡು ತಿಮ್ಮಪ್ಪ ಅವರ ಅಧಿಕಾರಾವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ಪ್ರತಿ ಹಂತದಲ್ಲೂ ಸಚಿವ ಸ್ಥಾನ ದೊರೆಯುತ್ತಿತ್ತು. ಆದರೆ ಪ್ರಸ್ತುತ ಸಾಗರ ತಾಲೂಕಿಗೆ ಸಮರ್ಪಕ ರಾಜಕೀಯ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಪರವಾಗಿ ಯಾಕೆ ಧ್ವನಿ ಎತ್ತುತ್ತಿಲ್ಲ, ಕಾಂಗ್ರೆಸ್ ಪಕ್ಷವು ಅಧಿಕಾರದ ವಿಕೇಂದ್ರೀಕರಣದ ತತ್ವವನ್ನು ಹೊಂದಿದ್ದರೂ, ಅದು ಈಗ ಘೋಷಣೆಗೆ ಮಾತ್ರ ಸೀಮಿತವಾಗುತ್ತಿರುವಂತಿದೆ. ಈ ಹಿಂದೆ ಮಧು ಬಂಗಾರಪ್ಪ ಸಚಿವರಾದಾಗ ಎಲ್ಲರೂ ಸ್ವಾಗತಿಸಿದ್ದೇವೆ. ಇದೀಗ ಸಾಗರ ಕ್ಷೇತ್ರದ ಶಾಸಕರಿಗೂ ಸಚಿವ ಸ್ಥಾನ ದೊರೆಯಬೇಕು ಎಂದು ಹಾಕ್ಕೋತಾಯ ಮಾಡಿದರು.

ಸಾಗರ ತಾಲೂಕು ತನ್ನ ಬಹುಸಂಸ್ಕೃತಿಯ ವೈಶಿಷ್ಟ್ಯ ಹಾಗೂ ಭೌಗೋಳಿಕ ಮಹತ್ವದಿಂದ ಜಿಲ್ಲೆಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ. ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಂಡಿದ್ದ ತಾಲೂಕು ಈಗ ಅಭಿವೃದ್ಧಿಯಿಂದ ವಂಚಿತವಾಗುತ್ತಿದೆ. ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ದೊರೆತರೆ ಸಾಗರ ಮತ್ತಷ್ಟು ಅಭಿವೃದ್ಧಿ ಹೊಂದುವುದರ ಜೊತೆಗೆ ಜಿಲ್ಲಾ ಕೇಂದ್ರವಾಗುವ ಸಾಧ್ಯತೆಗಳು ಹೆಚ್ಚಾಗಲಿವೆ ಎಂದು ಅಭಿಪ್ರಾಯಪಟ್ಟರು.
ಮುಳುಗಡೆ ಸಂತ್ರಸ್ತರ ಸಮಸ್ಯೆಗಳು, ಅರಣ್ಯ ಕಾಯ್ದೆಯಿಂದ ಜಮೀನು ಕಳೆದುಕೊಂಡ ರೈತರ ಸಂಕಷ್ಟಗಳು ಹಾಗೂ ರೆವೆನ್ಯೂ ಭೂಮಿಯನ್ನು ಪರಿಭಾವಿತ ಅರಣ್ಯ ಎಂದು ಘೋಷಿಸುವ ಪ್ರಯತ್ನಗಳಂತಹ ಗಂಭೀರ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಬಲವಾದ ಧ್ವನಿ ಎತ್ತಬೇಕಾಗಿದೆ. ಅದಕ್ಕಾಗಿ ಗೋಪಾಲಕೃಷ್ಣ ಬೇಳೂರು ಅವರು ಸಚಿವರಾಗುವುದು ಅಗತ್ಯ ಎಂದು ಹೇಳಿದರು.
ಗೋಪಾಲಕೃಷ್ಣ ಬೇಳೂರು ಅವರು ಪಾರದರ್ಶಕ ಹಾಗೂ ಜನಪರ ಆಡಳಿತ ಮನೋಭಾವ ಹೊಂದಿದ್ದು, ಸಚಿವ ಸ್ಥಾನ ನೀಡುವುದರಿಂದ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಸಾಧ್ಯವಾಗುತ್ತದೆ. ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುವ ದೃಷ್ಟಿಯಿಂದಲೂ ಜಿಲ್ಲಾ ಹಾಗೂ ರಾಜ್ಯ ಸಮಿತಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆಚಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಖಲೀಂ ಉಲ್ಲಾ ಖಾನ್, ಮಾತನಾಡಿ ಜಿಲ್ಲಾ ಹಾಗೂ ತಾಲೂಕು ಕಾಂಗ್ರೆಸ್ ಸಮಿತಿಗಳು ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಸಚಿವ ಸ್ಥಾನಕ್ಕಾಗಿ ಬಲವಾದ ಧ್ವನಿ ಎತ್ತಬೇಕಾಗಿದೆ ಎಂದು ಆಗ್ರಹಿಸಿದರು.
ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಗೋಪಾಲಕೃಷ್ಣ ಬೇಳೂರು ಅವರು, ಪಕ್ಷ ಸಂಘಟನೆ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮುಂಚೂಣಿ ನಾಯಕರಾಗಿದ್ದಾರೆ. ಇಂತಹವರಿಗೆ ಸಚಿವ ಸ್ಥಾನ ದೊರೆಯಲೇಬೇಕು ಎಂದರು.
ಮಾಜಿ ಗ್ರಾಮ ಪಂಚಾಯತ್ ಸದಸ್ಯ ಎಂ.ಎಲ್. ಈಶ್ವರ ಮಾತನಾಡಿ, ಸಾಗರ ತಾಲೂಕು ರಾಜ್ಯಕ್ಕೆ ಅಪಾರ ಕೊಡುಗೆ ನೀಡಿರುವ ಪ್ರದೇಶವಾಗಿದೆ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಜನರ ಆಶೀರ್ವಾದದಿಂದ ನಾಯಕತ್ವಕ್ಕೆ ಬಂದಿರುವ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾಂಗ್ರೆಸ್ ನಾಯಕತ್ವವನ್ನು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಗಜೇಂದ್ರ ಯಾದವ್, ಬಾಬುಲ್ ಸಾಬ್ರು, ರಮಾನಂದ ,ಅಮೀರ್, ಲೋಕೇಶ್, ಶರತ್ ನಾಗಪ್ಪ, ರಮತುಲ್ಲ, ಮೋಹನ್, ಬಸವರಾಜ್, ಮುಕುಂದ, ಚೌಡಪ್ಪ, ವಿಜಯ್, ಸಿರಾಜ್, ಆಸಿಫ್ ಇನ್ನಿತರರು ಉಪಸ್ತಿತರಿದ್ದರು.
















