Home Shivamogga Sagara ಬ್ಯಾಂಕ್ ಲೋನ್ ನೋಟಿಸ್ ತಂದ ತಲ್ಲಣ, ಸ್ವಂತ ತಮ್ಮನನ್ನೇ ಹೊಡೆದು ಕೊಂದ ಅಣ್ಣ..!

ಬ್ಯಾಂಕ್ ಲೋನ್ ನೋಟಿಸ್ ತಂದ ತಲ್ಲಣ, ಸ್ವಂತ ತಮ್ಮನನ್ನೇ ಹೊಡೆದು ಕೊಂದ ಅಣ್ಣ..!

36
0

✒️.. ಅಮಿತ್ ಆರ್ ಆನಂದಪುರ

ಶಿವಮೊಗ್ಗ (ಆನಂದಪುರ): ಬ್ಯಾಂಕ್ ಲೋನ್ ನೋಟಿಸ್ ಬಂದ ವಿಚಾರಕ್ಕೆ ಸಂಬಂಧಿಸಿದಂತೆ ಹಳೇ ದ್ವೇಷ ಸಾಧಿಸಿ, ಸ್ವಂತ ಅಣ್ಣನೇ ತಮ್ಮನ ಮೇಲೆ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಸಾಗರ ತಾಲೂಕಿನ ಆನಂದಪುರದ ಮಾದರಸನಕೊಪ್ಪ ಗ್ರಾಮದಲ್ಲಿ ಸಂಭವಿಸಿದೆ.

ಅಣ್ಣನ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ತಮ್ಮ ರಾಘವೇಂದ್ರ ತಂದೆ ಭೈರಪ್ಪ (39 ವರ್ಷ) ಚಿಕಿತ್ಸೆ ಫಲಿಸದೆ ಜೂನ್ 9ರಂದು ಮುಂಜಾನೆ ಸಾವನ್ನಪ್ಪಿದ್ದಾರೆ.

ಘಟನೆಯ ವಿವರ:

ತಾಲೂಕಿನ ಆನಂದಪುರದ ಮಾದರಸನಕೊಪ್ಪ ಗ್ರಾಮದ ನಿವಾಸಿಗಳಾದ ಮಹೇಶ (49 ವರ್ಷ) ಹಾಗೂ ರಾಘವೇಂದ್ರ (39 ವರ್ಷ) ಇಬ್ಬರೂ ಸಹೋದರರಾಗಿದ್ದಾರೆ. ಅಣ್ಣ ಮಹೇಶನಿಗೆ ಬ್ಯಾಂಕ್ ಲೋನ್ ವಿಚಾರವಾಗಿ ನೋಟಿಸ್ ಬಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆತ ತನ್ನ ತಮ್ಮ ರಾಘವೇಂದ್ರನೊಂದಿಗೆ ತೀವ್ರ ದ್ವೇಷ ಸಾಧಿಸುತ್ತಿದ್ದ ಎನ್ನಲಾಗಿದೆ.

ಮೇ 23, 2026ರಂದು ರಾತ್ರಿ 10:30ರ ಸುಮಾರಿಗೆ ರಾಘವೇಂದ್ರ ಅವರು ಗ್ರಾಮದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅಣ್ಣ ಮಹೇಶ ನಡುರಸ್ತೆಯಲ್ಲೇ ತಮ್ಮನನ್ನು ಅಡ್ಡಗಟ್ಟಿ, ತಡೆದು, ಕೆಟ್ಟದಾಗಿ ಬೈದು ದೊಣ್ಣೆಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಚಿಕಿತ್ಸೆ ಫಲಿಸದೆ ಕೊನೆಯುಸಿರು:

ಹಲ್ಲೆಯಿಂದ ಗಾಯಗೊಂಡಿದ್ದ ರಾಘವೇಂದ್ರ ಅವರನ್ನು ಆನಂದಪುರ, ಶಿವಮೊಗ್ಗದ ಮೆಗ್ಗಾನ್ ಹಾಗೂ ಅಮೃತ್ ಲೈಫ್ ಲೈನ್ ಆಸ್ಪತ್ರೆಗಳಿಗೆ ದಾಖಲಿಸಿ ಅತ್ಯಾಧುನಿಕ ಚಿಕಿತ್ಸೆ ಕೊಡಿಸಲಾಯಿತಾದರೂ ಯಾವುದೇ ಗುಣಮುಖ ಲಕ್ಷಣಗಳು ಕಂಡುಬರಲಿಲ್ಲ. ವೈದ್ಯರ ಸಲಹೆಯಂತೆ ಮನೆಗೆ ಕರೆತಂದು ಆರೈಕೆ ಮಾಡಲಾಗುತ್ತಿತ್ತಾದರೂ, ಜೂನ್ 9ರಂದು ಮುಂಜಾನೆ 3:45ಕ್ಕೆ ರಾಘವೇಂದ್ರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಆನಂದಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆ ಕೃತ್ಯ ನಡೆದ ಸ್ಥಳಕ್ಕೆ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್, ಐಪಿಎಸ್ ಬೆನಕ ಪ್ರಸಾದ್, ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ, ಪಿ ಎಸ್ ಐ ಪ್ರವೀಣ್, ಸುನಿಲ್ ಭೇಟಿನೀಡಿ ತನಿಖೆ ಮುಂದುವರಿಸುತ್ತಿದ್ದಾರೆ.

ಸಂಪಾದಕರ ನುಡಿ

ಸಾರ್ವಜನಿಕ ಸಂದೇಶ: ಆಸ್ತಿ, ಹಣದ ಕಲಹಕ್ಕೆ ಕರುಳಿನ ಬಾಂಧವ್ಯ ಬಲಿ ಕೊಡಬೇಡಿ, ತಾಳ್ಮೆ ಕಳೆದುಕೊಳ್ಳದಿರಿ!ಸಾಗರ ತಾಲೂಕಿನ ಮಾದರಸನಕೊಪ್ಪದಲ್ಲಿ ಬ್ಯಾಂಕ್ ಲೋನ್ ನೋಟಿಸ್ ವಿಚಾರವಾಗಿ ನಡೆದ ಜಗಳದಲ್ಲಿ ಸ್ವಂತ ಅಣ್ಣನೇ ತಮ್ಮನ ಕೊಲೆಗೆ ಕಾರಣವಾಗಿರುವ ಘಟನೆ ಇಡೀ ಸಮಾಜವೇ ತಲೆತಗ್ಗಿಸುವಂತದ್ದಾಗಿದೆ. ಹಣ, ಆಸ್ತಿ ಅಥವಾ ಸಾಲದ ವಿಚಾರಗಳು ಕ್ಷಣಿಕ, ಆದರೆ ಕರುಳಿನ ಸಂಬಂಧಗಳು ಮತ್ತು ಮನುಷ್ಯನ ಜೀವ ಅತ್ಯಂತ ಅಮೂಲ್ಯ.ನಮ್ಮ ಮನವಿ:ತಾಳ್ಮೆ ವಹಿಸಿ: ಕೌಟುಂಬಿಕ ಸಮಸ್ಯೆಗಳು, ಆರ್ಥಿಕ ಮುಗ್ಗಟ್ಟುಗಳು ಅಥವಾ ಸಾಲದ ನೋಟಿಸ್‌ಗಳು ಬಂದಾಗ ಆವೇಶಕ್ಕೆ ಒಳಗಾಗಬೇಡಿ. ಆಕ್ರೋಶದಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ, ಬದಲಿಗೆ ಬದುಕು ನಾಶವಾಗುತ್ತದೆ.ಕಾನೂನಾತ್ಮಕ/ಸಮಾಧಾನದ ಹಾದಿ ಹಿಡಿಯಿರಿ: ಬ್ಯಾಂಕ್ ಅಥವಾ ಆಸ್ತಿ ವಿಚಾರದಲ್ಲಿ ಗೊಂದಲಗಳಿದ್ದರೆ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಮಾತನಾಡಿ ಬಗೆಹರಿಸಿಕೊಳ್ಳಿ ಅಥವಾ ಕಾನೂನಿನ ನೆರವು ಪಡೆಯಿರಿ. ರಸ್ತೆಗಿಳಿದು ಕಾನೂನು ಕೈಗೆತ್ತಿಕೊಳ್ಳಬೇಡಿ.ಒಂದು ಕ್ಷಣದ ಕೋಪ, ಇಡೀ ಕುಟುಂಬಕ್ಕೆ ಶಾಪ: ಇಲ್ಲಿ ಒಂದು ಕ್ಷಣದ ಕೋಪಕ್ಕೆ ಒಬ್ಬ ಸಹೋದರ ಪ್ರಾಣ ಕಳೆದುಕೊಂಡರೆ, ಮತ್ತೊಬ್ಬ ಜೈಲು ಪಾಲಾಗುತ್ತಾರೆ. ಇಬ್ಬರ ಕುಟುಂಬಗಳೂ ಆರ್ಥಿಕ ಸಂಕಷ್ಟಗಳು ಎದುರಿಸುವ ಸಂಭವನೀಯಗಳಿಗೆ.”ಕೋಪದ ಕೈಗೆ ಬುದ್ಧಿ ಕೊಡಬೇಡಿ. ಸಂಬಂಧಗಳನ್ನು ಪ್ರೀತಿಸಿ, ಜೀವಕ್ಕೆ ಗೌರವ ನೀಡಿ.” – ಸಾರ್ವಜನಿಕ ಹಿತಾಸಕ್ತಿ ಕಳಕಳಿ: ಅಮಿತ್ ಟೈಮ್ಸ್ (Amith Times) ಸುದ್ದಿ ವಾಹಿನಿ.