ಲೇಖನ: ಮಧುಕರ್ ನಾಯ್ಕ್ ಕ್ಲಿನಿಕಲ್ ಸೈಕಾಲಜಿಸ್ಟ್, DDRC ಚಿಕ್ಕಮಗಳೂರು, 8762967635
ಇಂದಿನ ತಂತ್ರಜ್ಞಾನದ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿವೆ! ಆದರೆ, ಇದೇ ತಂತ್ರಜ್ಞಾನ ಇಂದು ನಮ್ಮ ಮುಂದಿನ ಪೀಳಿಗೆಯ ಪಾಲಿಗೆ ಮಾರಕವಾಗಿ ಪರಿಣಮಿಸುತ್ತಿರುವುದು ತೀವ್ರ ಆತಂಕದ ವಿಚಾರ.! ಅಡಿಕೆ ತೋಟ, ಹಸಿರು ಕಾನನ, ಬೆಳ್ಳಂಬೆಳಿಗ್ಗೆ ಕೇಳೋ ಹಕ್ಕಿ ಪಿಸುಮಾತುಗಳ ಮಧ್ಯೆ ಬೆಳೆಯಬೇಕಾದ ನಮ್ಮ ಯುವ ಸಮುದಾಯ ಇವತ್ತು ಆ ಮಣ್ಣಿನ ವಾಸನೆ ಮರೆತು, ಆ ನಾಲ್ಕು ಇಂಚಿನ ಗಾಜಿನ ಪೆಟ್ಟಿಗೆಯೊಳಗೆ (ಮೊಬೈಲ್) ಮುಳುಗಿ ಹೋಗಿರೋದು ನೋಡಿದ್ರೆ ಎದೆ ಜಲ್ಲೆನ್ನುತ್ತದೆ!
ಇತ್ತೀಚಿನ ದಿನಗಳಲ್ಲಿ ಪತ್ರಿಕೆ, ಟಿವಿಗಳನ್ನ ನೋಡಿದ್ರೆ “ಮೊಬೈಲ್ ಬಳಸಬೇಡ ಎಂದಿದಕ್ಕೆ ಮಗಳು ಆತ್ಮಹತ್ಯೆ”, “ಪೋಷಕರು ಮೊಬೈಲ್ ಕಸಿದುಕೊಂಡಿದ್ದಕ್ಕೆ ಬಾಲಕನಿಂದ ನೇಣು” “ಸೋಶಿಯಲ್ ಮೀಡಿಯಾದಲ್ಲಿನ ನಿಂದನೆ ತಾಳಲಾರದೆ ಯುವತಿ ಸಾವು” ” ಮೊಬೈಲ್ ಗೇಮ್ ನಿಂದ ಸಾಲದ ಕೂಪಕ್ಕೆ ಬಂದ ಸಂಸಾರ ” ಅಬ್ಬಬ್ಬಾ ಎಂಬಂತಹ ಹೃದಯವಿದ್ರಾವಕ ಸುದ್ದಿಗಳು ನಿತ್ಯವೂ ನಮ್ಮೆಲ್ಲರ ಕಣ್ಣಿಗೆ ಕಾಣ್ತಿವೆ ಅಲ್ವಾ? ನಾವೆಲ್ಲ ಅರೆ ಕ್ಷಣ ಈ ಕುರಿತು ಮಾತಾಡಿ ಸುಮ್ಮನಾಗ್ತೀವಿ, ಮತ್ತೊಮ್ಮೆ ಮೊಬೈಲ್ ಹಿಡಿದು ಕೂತುಬಿಡ್ತೀವಿ.. ಇಷ್ಟಕ್ಕೆ ಸಾಕಾ? ಮೊನ್ನೆ ಮೊನ್ನೆ ತನಕ ಆಟದ ಮೈದಾನಗಳಲ್ಲಿ ಕಳೆದಿದ್ದ ಬಾಲ್ಯ ಇಂದು ನಾಲ್ಕು ಇಂಚಿನ ಪರದೆಯೊಳಗೆ ಬಂಧಿಯಾಗಿದೆ.!
ಯುವ ಮನಸುಗಳಲ್ಲಿ ಹೆಚ್ಚುತ್ತಿರುವ ಈ ಮೊಬೈಲ್ ಗೀಳು ಕೇವಲ ಕಣ್ಣಿನ ದೃಷ್ಟಿಯನ್ನಷ್ಟೇ ಕಸಿದುಕೊಳ್ಳುತ್ತಿಲ್ಲ, ಬದಲಾಗಿ ಅವರ ಜೀವವನ್ನಾ ಸುಂದರ ಭವಿಷ್ಯವನ್ನ ಬಲಿಪಡಿತಿದೆ ಈ ಕುರಿತು ನಾ ಗಮನಿಸಿದ ಒಂದಿಷ್ಟೂ ವಿಚಾರಗಳು:

- ಸಾಮಾಜಿಕ ಜಾಲತಾಣಗಳ ( Social media) ಮಾಯಾಜಾಲ ಮತ್ತು ಕೀಳರಿಮೆ : ಇಂದಿನ ಯುವಜನತೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್ ಮುಂತಾದ ಜಾಲತಾಣಗಳಲ್ಲಿನ ‘ಲೈಕ್ಸ್’ (Likes) ಮತ್ತು ‘ಕಮೆಂಟ್ಸ್’ಗಳ (Comments) ಆಧಾರದ ಮೇಲೆ ತಮ್ಮ ಯೋಗ್ಯತೆಯನ್ನು ಅಳೆದುಕೊಳ್ಳುವಂತಾಗಿದೆ.! ಇತರರ “ಪರ್ಫೆಕ್ಟ್” ಎನಿಸುವ ನಕಲಿ ಫೋಟೋಗಳನ್ನು ನೋಡಿ ತಮ್ಮ ನೈಜ ಬದುಕಿನೊಂದಿಗೆ ಹೋಲಿಸಿಕೊಂಡು ಕೀಳರಿಮೆಗೆ ಒಳಗಾಗುತ್ತಿದ್ದಾರೆ.. ಯಾವುದು ಸತ್ಯ ಯಾವುದು ಸುಳ್ಳು ಎನ್ನುವ ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ.. ಇನ್ನು ಸೈಬರ್ ಬುಲ್ಲಿಯಿಂಗ್ (Cyberbullying) ಅಥವಾ ಆನ್‌ಲೈನ್ ನಿಂದನೆಯಂತೂ ಮಕ್ಕಳನ್ನು ತೀವ್ರ ಖಿನ್ನತೆಗೆ ದೂಡುತ್ತಿದೆ. ಡಿಜಿಟಲ್ ಜಗತ್ತಿನಲ್ಲಿ ಆಗುವ ಅವಮಾನವನ್ನು ಎದುರಿಸಲಾಗದೆ, ಯಾರೊಂದಿಗೂ ಹಂಚಿಕೊಳ್ಳಲಾಗದೆ ಮಕ್ಕಳು ಖಿನ್ನತೆಗೆ ಜಾರುತ್ತಿದ್ದಾರೆ..
- ವಿಡಿಯೋ ಗೇಮ್‌ಗಳ ವ್ಯಸನ : ಆನ್‌ಲೈನ್ ಗೇಮ್‌ಗಳು ಮಕ್ಕಳ ಮಿದುಳಿನ ಮೇಲೆ ಮದ್ಯಪಾಶದಷ್ಟೇ ಭೀಕರ ಪರಿಣಾಮ ಬೀರಬಲ್ಲವು ಎಂದು ಪದೇ ಪದೇ ಮನೋವೈದ್ಯರು, ಮನೋಶಾಸ್ತ್ರಜ್ಞರು ಎಚ್ಚರಿಸುತ್ತಾರೆ ಹಾಗೂ ಈ ಬಗ್ಗೆ ಹತ್ತಾರು ಪೇಪರ್ artical ಗಳನ್ನ ನಾವೆಲ್ಲಾ ಒತ್ತೀವಿ.. ಪಬ್‌ಜಿ, ಫ್ರೀ ಫೈರ್‌ನಂತಹ ಆಟಗಳಲ್ಲಿ ಸೋತಾಗ ಅಥವಾ ಆಟವಾಡಲು ಮೊಬೈಲ್ ಸಿಗದಿದ್ದಾಗ ಮಕ್ಕಳು ವಿಪರೀತ ಕೋಪಗೊಳ್ಳುತ್ತಾರೆ ಅದನ್ನ ಅಲ್ಲೇ ಸುತ್ತ ಮುತ್ತ ಇರೋ ನಾವು ಗಮನಿಸಿ ಇರ್ತೀವಿ! ಗೇಮ್‌ಗಾಗಿ ಪೋಷಕರಿಗೆ ಸುಳ್ಳು ಹೇಳುವುದು, ಹಣ ಕದಿಯುವುದು, ಸಿಕ್ಕಿಬಿದ್ದಾಗ ಅಗುವ ಅವಮಾನ ಹಾಗೂ ಗೇಮ್ ಆಡಲು ಪೋಷಕರು ನಿರ್ಬಂಧಿಸಿದಾಗ ಉಂಟಾಗುವ ಹತಾಶೆಯಿಂದಾಗಿ ಅದೆಷ್ಟೋ ಮಕ್ಕಳು ಕ್ಷಣಿಕ ಆವೇಶದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಮನೆ ಇಂದ ಕಾಣೆ ಆಗುವ ಹೊಸ ರೀತಿಯ ಬೆದರಿಕೆ ಹಾಕ್ತಾರೆ!
- ನೈಜ ಸಂಬಂಧಗಳಿಂದ ದೂರ (Isolation) : ಮೊಬೈಲ್ ಪರದೆಗೆ ಅಂಟಿಕೊಳ್ಳುವ ಮಕ್ಕಳು ಕುಟುಂಬ ಮತ್ತು ಸ್ನೇಹಿತರಿಂದ ಮಾನಸಿಕವಾಗಿ ದೂರವಾಗುತ್ತಾರೆ. ಅವರಿಗೆ ನೈಜ ಜಗತ್ತಿನ ಕಷ್ಟ-ಸುಖಗಳ ಅರಿವು ಇರುವುದಿಲ್ಲ. ತಮಗೆ ಯಾವುದಾದರೂ ಸಮಸ್ಯೆ ಎದುರಾದಾಗ ಪೋಷಕರು ಅಥವಾ ಆಪ್ತರೊಂದಿಗೆ ಮುಕ್ತವಾಗಿ ಮಾತನಾಡುವ ಕೌಶಲ್ಯವನ್ನೇ ಅವರು ಕಳೆದುಕೊಂಡಿರುತ್ತಾರೆ. ಈ ಒಂಟಿತನವೇ ಅವರನ್ನು ಖಿನ್ನತೆಗೆ ಮತ್ತು ಅಂತಿಮವಾಗಿ ಸಾವಿನೆಡೆಗೆ ತಳ್ಳುತ್ತಿದೆ.
- ನಿದ್ದೆಯ ಕೊರತೆ ಮತ್ತು ಮಾನಸಿಕ ಅಸ್ವಸ್ಥತೆ: ರಾತ್ರಿಯಿಡೀ ಮೊಬೈಲ್ ನೋಡುವುದರಿಂದ ಯುವ ಮನಸುಗಳ ಹಾಗೂ ಮಕ್ಕಳ ನಿದ್ರಾಚಕ್ರ ಸಂಪೂರ್ಣವಾಗಿ ಹಾಳಾಗುತ್ತಿದೆ.. ನಿದ್ದೆಯ ಕೊರತೆಯು ನೇರವಾಗಿ ಅವರ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿ, ಆಲೋಚನಾ ಶಕ್ತಿಯನ್ನು ಕುಗ್ಗಿಸುತ್ತದೆ. ಇದು ಹಠಮಾರಿತನ, ಅಸಹಿಷ್ಣುತೆ ಮತ್ತು ಕೋಪಕ್ಕೆ ಕಾರಣವಾಗುತ್ತದೆ.!

ಪೋಷಕರು ಮತ್ತು ಸಮಾಜದ ಪಾತ್ರವೇನು.?
ಈ ಮಹಾಮಾರಿಯಿಂದ ಮಕ್ಕಳನ್ನು ರಕ್ಷಿಸುವುದು ಕೇವಲ ಶಿಕ್ಷಕರು, ಮನೋಶಾಸ್ತ್ರಜ್ಞರು ಅಥವಾ ಸರ್ಕಾರದ ಜವಾಬ್ದಾರಿಯಲ್ಲ, ಪೋಷಕರ ಪಾತ್ರವೆ ಇದರಲ್ಲಿ ಅತ್ಯಂತ ಪ್ರಮುಖವಾದದ್ದು.!
ಮೊದಲು ಸಮಯದ ಮಿತಿ ಇರಲಿ : ಮಕ್ಕಳಿಗೆ ಮೊಬೈಲ್ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಕಷ್ಟ. ಆದರೆ, ಪರದೆಯ ಸಮಯವನ್ನು (Screen time) ಕಟ್ಟುನಿಟ್ಟಾಗಿ ನಿಗದಿಪಡಿಸಬೇಕು, ಹಾಗೂ ಊಟ ಮಾಡುವಾಗ ಮತ್ತು ಮಲಗುವ ಮುನ್ನ ಮೊಬೈಲ್ ಬಳಕೆಯನ್ನು ನಿಷೇಧಿಸಬೇಕು.!
ಮಕ್ಕಳೊಂದಿಗೆ ಬೆರೆಯಿರಿ: ಪೋಷಕರು ಮೊಬೈಲ್ ಬದಿಗಿಟ್ಟು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಅವರ ದಿನಚರಿ, ಶಾಲೆಯ ಆಗುಹೋಗುಗಳು, ಸ್ನೇಹಿತರ ಬಗ್ಗೆ ಮುಕ್ತವಾಗಿ ಮಾತನಾಡಬೇಕು ವಯೋ ಸಹಜ ರೀತಿ ನೀತಿಯ ಕುರಿತು ತಿಳಿದಿರಬೇಕು.
ಹೊರಾಂಗಣ ಆಟಗಳಿಗೆ ಪ್ರೋತ್ಸಾಹ: ಮೈದಾನದಲ್ಲಿ ಆಡುವ ಆಟಗಳು, ಚಿತ್ರಕಲೆ, ಸಂಗೀತ, ಓದುವ ಹವ್ಯಾಸಗಳನ್ನು ಬೆಳೆಸಲು ಪ್ರೋತ್ಸಾಹಿಸಬೇಕು. ಇದರಿಂದ ಅವರ ಶಕ್ತಿ ಸಕಾರಾತ್ಮಕವಾಗಿ ಬಳಕೆಯಾಗುತ್ತದೆ. ಚೆಸ್ ಹಾಗೂ ಬೌದಿಕ ಶಕ್ತಿಯನ್ನು ಹೆಚ್ಚಿಸೋ ಆಟಗಳಿಗೆ ಪ್ರೇರಣೆ ನೀಡಬೇಕು..
ಮಾನಸಿಕ ಬೆಂಬಲ : ಮಕ್ಕಳು ಹಠ ಮಾಡಿದಾಗ ಅಥವಾ ಮೊಬೈಲ್ ಕಳೆದುಕೊಂಡಾಗ ಅವರನ್ನು ವಿಪರೀತ ಬೈಯುವುದು ಅಥವಾ ಹೊಡೆಯುವ ಬದಲು, ತಾಳ್ಮೆಯಿಂದ ಪರಿಸ್ಥಿತಿಯನ್ನು ವಿವರಿಸಬೇಕು. ಅಂಕಗಳೇ ಜೀವನವಲ್ಲ, ಮೊಬೈಲ್ ಇಲ್ಲದೆಯೂ ಸುಂದರ ಬದುಕಿದೆ ಎಂಬುದನ್ನು ಮನವರಿಕೆ ಮಾಡಬೇಕು.. ಅಗತ್ಯವಿದ್ದರೆ ಮನೋವೈದ್ಯರ ಹಾಗೂ ಮನೋಶಾಸ್ತೃಜ್ಞರ ಸಲಹೆ ಪಡೆಯಲು ಹಿಂಜರಿಯಬಾರದು.!

ಎಳೆಯ ಕುಡಿಗಳು ಅರಳುವ ಮೊದಲೇ ಈ ಡಿಜಿಟಲ್ ಬೆಂಕಿಯಲ್ಲಿ ಕಮರಿ ಹೋಗಬಾರದು, ತಂತ್ರಜ್ಞಾನ ಅನ್ನೋದು ನಮಗೆ ಬೇಕು, ಆದ್ರೆ ಅದು ನಮಗೆ ದಾಸನಾಗಿರಬೇಕೇ ಹೊರತು ಅದೇ ನಮ್ಮ ಯಜಮಾನನಾಗಬಾರದು.. ಬದುಕು ಬಹಳ ದೊಡ್ಡದಿದೆ, ಅದು ಈ ಮೊಬೈಲ್ ಪರದೆಯೊಳಗೆ ಅಡಗಿಲ್ಲ. ಇನ್ನಾದರೂ ನಾವೆಲ್ಲ ಎಚ್ಚೆತ್ತುಕೊಳ್ಳೋಣ, ನಮ್ಮ ಮುಂದಿನ ಪೀಳಿಗೆಯನ್ನು ಈ ಕರಾಳ ಹಳ್ಳದಿಂದ ರಕ್ಷಿಸೋಣ..
ಕೊನೆದಾಗಿ ಇದೊಂದು ಮಾತು ಹೇಳ್ತೀನಿ ಕೇಳಿ ಲಕ್ಷ ಕೊಡೋ ಮೊಬೈಲ್ಗಿಂತ, ನಮ್ಮ ಹಾಗೂ ನಮ್ಮವರ ಲಕ್ಷಣವಾದ ನಗು ನಮಗೆ ಮುಖ್ಯ ಅಲ್ವಾ?









