Home Blog ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ..!!

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ..!!

17
0

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಸಿಎಂ ಸಿದ್ದರಾಮಯ್ಯನವರು ಗುರುವಾರ (ಮೇ 28) ಕಾವೇರಿ ನಿವಾಸದಲ್ಲಿ ಆಯೋಜಿಸಿದ್ದ ಬ್ರೇಕ್ ಫಾಸ್ಟ್ ಸಭೆಯಲ್ಲಿ ತಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಚಿವರು, ಶಾಸಕರ ಸಮ್ಮುಖದಲ್ಲಿ ಘೋಷಿಸಿದ್ದಾರೆಂದು ರಾಜ್ಯ ಮಾಧ್ಯಮಗಳ ವರದಿ ತಿಳಿಸಿದೆ.

ನವದೆಹಲಿಯ ಇಂದಿರಾ ಭವನದಲ್ಲಿ ನಡೆದ ಪಕ್ಷದ ಹೈಕಮಾಂಡ್ ಸಭೆಯಲ್ಲಿ ನೀಡಿರುವ ಸೂಚನೆಯಂತೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಸಿಎಂ ಸಿದ್ದರಾಮಯ್ಯನವರು ಸಚಿವರಿಗೆ ಮನವರಿಕೆ ಮಾಡಿದ್ದಾರೆನ್ನಲಾಗಿದೆ.

ಕಳೆದ ಮೂರು ವರ್ಷಗಳ ಕಾಲ ನನಗೆ ಸಹಕಾರ ನೀಡಿದ್ದೀರಿ. ನಮ್ಮ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಹೊಣೆಗಾರಿಕೆ ನಿಮ್ಮದಾಗಿದೆ. ಮುಂದಿನ ನಿರ್ಣಯಗಳನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದೆ ಎಂದು ಸಿದ್ದರಾಮಯ್ಯನವರು ತಿಳಿಸಿದ್ದು, ಈ ಸಂದರ್ಭದಲ್ಲಿ ಸಚಿವರು, ಶಾಸಕರಿಗೆ ಅಭಿನಂದನೆ ಸಲ್ಲಿಸಿರುವುದಾಗಿ ವರದಿ ವಿವರಿಸಿದೆ.

ಸಿದ್ದರಾಮಯ್ಯನವರ ರಾಜೀನಾಮೆ ಘೋಷಣೆ ಮೂಲಕ ಕಳೆದ ಎರಡು ದಿನಗಳಿಂದ ರಾಜ್ಯರಾಜಕಾರಣದಲ್ಲಿ ನಡೆಯುತ್ತಿದ್ದ ಗೊಂದಲಗಳಿಗೆ ತೆರೆ ಬಿದ್ದಿದ್ದು, ಡಿಕೆ ಶಿವಕುಮಾ‌ರ್ ಅವರು ಮುಖ್ಯಮಂತ್ರಿ ಹುದ್ದೆಗೇರುವ ಹಾದಿ ಸುಗಮವಾದಂತಾಗಿದೆ.

ಸಿಎಂ ಕಾಲಿಗೆ ಬಿದ್ದ ಡಿಕೆಶಿ:

ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯೋಜಿಸಿದ್ದ ಉಪಹಾರ ಕೂಟಕ್ಕೆ ಆಗಮಿಸಿದ್ದ ಡಿಸಿಎಂ ಡಿಕೆ ಶಿವಕುಮಾ‌ರ್ ಅವರು ಸಿದ್ದರಾಮಯ್ಯನವರನ್ನು ಆಲಂಗಿಸಿ, ನಂತರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ವೇಳೆ ಸಿದ್ದರಾಮಯ್ಯನವರು ಅಭಿನಂದನೆ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.

ಕುತೂಹಲ ಮೂಡಿಸಿದ ಸುರ್ಜೇವಾಲಾ ನಡೆ:

ಕಾವೇರಿ ನಿವಾಸದಲ್ಲಿ ನಡೆಯುತ್ತಿರುವ ಉಪಹಾರ ಕೂಟಕ್ಕೆ ರಣದೀಪ್ ಸಿಂಗ್ ಸುರ್ಜೇವಾಲಾ ಗೈರುಹಾಜರಾಗಿದ್ದು, ಖಾಸಗಿ ಹೋಟೆಲ್ ನಲ್ಲಿ ಉಳಿದುಕೊಂಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಬ್ರೇಕ್ ಫಾಸ್ಟ್ ಸಭೆ ಮುಗಿದ ನಂತರ ಸುರ್ಜೇವಾಲಾ ಅವರು ಕಾವೇರಿಗೆ ತೆರಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಡಿಕೆಶಿ ಜತೆ ಸಿದ್ದರಾಮಯ್ಯ ರಹಸ್ಯ ಮಾತುಕತೆ:

ಕಾವೇರಿ ನಿವಾಸದಲ್ಲಿ ಆಯೋಜಿಸಿದ್ದ ಉಪಹಾರ ಕೂಟಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾ‌ರ್ ಸುಮಾರು 11 ನಿಮಿಷಗಳ ಕಾಲ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಮಾತುಕತೆ ನಂತರ ಬ್ರೇಕ್ ಫಾಸ್ಟ್ ಗೆ ನಾಯಕರು ಆಗಮಿಸಿರುವುದಾಗಿ ವರದಿ ತಿಳಿಸಿದೆ.

ರಾಜ್ಯಪಾಲರ ಗೈರುಹಾಜರಿ ರಾಜೀನಾಮೆ ಪ್ರಕ್ರಿಯೆ ಹೇಗೆ?

ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಅವರು ತುರ್ತು ಕಾರಣದ ನಿಮಿತ್ತ ಮುಂಬೈಗೆ ತೆರಳಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಕೆ ತಡವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯಪಾಲರ ಅನುಪಸ್ಥಿತಿಯಲ್ಲಿ ರಾಜಭವನದ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಸಲ್ಲಿಸಿದರೆ ಅದು ಕಾನೂನುಬದ್ಧವಾಗಿ ಅಂಗೀಕಾರವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಇಂದೇ ರಾಜಭವನಕ್ಕೆ ವಾಪಸ್ ಆಗಲಿದ್ದಾರೆಯೋ ಅಥವಾ ವಿಳಂಬವಾಗಲಿದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.