ಬೆಂಗಳೂರು: ಸಿಎಂ ಕುರ್ಚಿ ಬದಲಾವಣೆ ರಾಜ್ಯ ರಾಜಕಾರಣದಲ್ಲಿ ಕಳೆದ ಮೂರು ವರ್ಷಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ಪ್ರಹಸನ ಈಗ ಕ್ರೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಳೂರಿನ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಹೈ-ವೋಲ್ಟೇಜ್ ಉಪಹಾರ ಕೂಟದಲ್ಲಿ ಅತ್ಯಂತ ಅಪರೂಪದ ಹಾಗೂ ಭಾವನಾತ್ಮಕ ಸನ್ನಿವೇಶವೊಂದು ಸಾಕ್ಷಿಯಾಗಿದೆ.
ಸಭೆಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡು, ಬಳಿಕ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಈ ದೃಶ್ಯ ಸದ್ಯ ಕೈ ಪಾಳಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಕಾವೇರಿ’ಗೆ ಸಚಿವರ ದಂಡು: ಬಿಗಿ ಭದ್ರತೆ ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ವದಂತಿಗಳು ತಾರಕಕ್ಕೇರಿರುವ ಬೆನ್ನಲ್ಲೇ ಸಿಎಂ ಕರೆದಿದ್ದ ಈ ಸಭೆಗೆ ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ್ ಸೇರಿದಂತೆ ಪ್ರಮುಖ ನಾಯಕರು ಆಗಮಿಸಿದರು. ಮುಖ್ಯಮಂತ್ರಿಗಳ ನಿವಾಸದ ಸುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ರಾಜಕೀಯ ವಲಯದ ಕಣ್ಣುಗಳೆಲ್ಲವೂ ಈಗ ಕಾವೇರಿ ನಿವಾಸದ ಮೇಲೆಯೇ ನೆಟ್ಟಿವೆ.

ದೆಹಲಿ ಆಫರ್ ಏನು? ಪರಮೇಶ್ವರ್ ಹೇಳಿದ್ದೇನು?
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ನಾಯಕ ಜಿ. ಪರಮೇಶ್ವರ್, “ಇದು ಕೇವಲ ಮುಖ್ಯಮಂತ್ರಿಗಳು ತಮ್ಮ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸಲು ಕರೆದಿದ್ದ ಸಭೆಯಷ್ಟೇ” ಎಂದು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಸಿದ್ದರಾಮಯ್ಯ ಅವರಿಗೆ ದೆಹಲಿ ರಾಜಕಾರಣದಲ್ಲಿ ಅಥವಾ ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಜವಾಬ್ದಾರಿ ನೀಡುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಬಗ್ಗೆ ನಮಗೆ ಇನ್ನೂ ಸ್ಪಷ್ಟತೆ ಇಲ್ಲ, ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದೆ” ಎಂದರು. ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರಿಗೆ ರಾಜ್ಯಸಭಾ ಸೀಟು ನೀಡಿ ಕೇಂದ್ರ ರಾಜಕಾರಣಕ್ಕೆ ಕರೆದೊಯ್ಯುವ ಸೂತ್ರವನ್ನು ಹೈಕಮಾಂಡ್ ಮುಂದಿಟ್ಟಿದೆ ಎನ್ನಲಾಗಿದೆ.
ಟ್ವಿಸ್ಟ್ ಕೊಟ್ಟ ರಾಜ್ಯಪಾಲರು:
ಒಂದು ಕಡೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರ ಸಲ್ಲಿಸಲು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರ ಭೇಟಿಗೆ ಸಮಯ ಕೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದೇ ಹೊತ್ತಿನಲ್ಲಿ ರಾಜ್ಯಪಾಲರು ಬುಧವಾರ ತಡರಾತ್ರಿ ದಿಢೀರನೆ ಮುಂಬೈಗೆ ಪ್ರಯಾಣ ಬೆಳೆಸಿರುವುದು ಭಾರಿ ಕುತೂಹಲ ಮೂಡಿಸಿದೆ. ಆಪ್ತ ರಕ್ತಸಂಬಂಧಿಯೊಬ್ಬರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಮುಂಬೈಗೆ ತೆರಳಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿದ್ದು, ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ.
















