Home Shivamogga Sagara ಬಿದರೂರು ವರ್ಧಮಾನ ಸ್ವಾಮಿಯ ಪಂಚಕಲ್ಯಾಣ ಮಹೋತ್ಸವ..!!

ಬಿದರೂರು ವರ್ಧಮಾನ ಸ್ವಾಮಿಯ ಪಂಚಕಲ್ಯಾಣ ಮಹೋತ್ಸವ..!!

33
0

ಸಾಗರ/(ಕಾರ್ಗಲ್-ಏ.25): ಜೈನತ್ವದ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮಾತ್ರ ಜಗತ್ತಿನಲ್ಲಿ ನಿಜವಾದ ಶಾಂತಿ ನೆಲೆಸಲು ಸಾಧ್ಯ ಎಂದು ಹಿರಿಯ ಸಾಹಿತಿ ಹಾಗೂ ಚಿಂತಕ ಮುನಿರಾಜ ರೆಂಜಾಳ ಹೇಳಿದರು.

ಅವರು ಸಮೀಪದ ಬಿದರೂರುದಲ್ಲಿನ ವರ್ಧಮಾನ ಸ್ವಾಮಿಯ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಜೈನ ಧರ್ಮವು ಅತ್ಯಂತ ಶ್ರೇಷ್ಠವಾದ ಧರ್ಮವಾಗಿದ್ದು, ಅದರ ಪ್ರತಿಯೊಂದು ವಿಚಾರಧಾರೆಗಳನ್ನು ಅರಿತು ಜೀವನದಲ್ಲಿ ಅನುಷ್ಠಾನಗೊಳಿಸಿದರೆ ನೆಮ್ಮದಿ ಹಾಗೂ ಶಾಂತಿ ಸಾಧಿಸಲು ಸಾಧ್ಯವಾಗುತ್ತದೆ.

ವೃಷಭನಾಥರಿಂದ ಆರಂಭವಾಗಿ ಮಹಾವೀರರವರೆಗೆ ತೀರ್ಥಂಕರರು ನೀಡಿದ ಮಾರ್ಗದರ್ಶನ ಮಾನವಕುಲಕ್ಕೆ ಅಪಾರವಾದ ಕೊಡುಗೆಯಾಗಿದೆ. ವಿಶೇಷವಾಗಿ ಮಹಾವೀರರ ಆದರ್ಶಗಳು ಜೀವಜಗತ್ತನ್ನು ಉದ್ಧಾರಗೊಳಿಸಿದ ಮಹಾನ್ ಚಿಂತನೆಗಳಾಗಿವೆ ಎಂದು ಹೇಳಿದರು.

‘ಬದುಕು ಬದುಕಲು ಬಿಡಿ’ ಎಂಬ ಜೈನ ತತ್ವವನ್ನು ಪ್ರತಿಯೊಬ್ಬರೂ ಹೃದಯದಲ್ಲಿ ಅಳವಡಿಸಿಕೊಳ್ಳಬೇಕು. ಸುತ್ತಮುತ್ತಲಿನ ಜನರೊಂದಿಗೆ ಪ್ರೀತಿ, ಸಹಾನುಭೂತಿಯಿಂದ ನಡೆದುಕೊಂಡರೆ ಊರಿನಲ್ಲಿ ಶಾಂತಿ ನೆಲೆಸುತ್ತದೆ. ಅದೇ ದೇಶ ಮತ್ತು ಜಗತ್ತಿನ ಮಟ್ಟದಲ್ಲಿಯೂ ಶಾಂತಿ ನೆಲೆಸಲು ಕಾರಣವಾಗುತ್ತದೆ ಎಂದರು.

ಭಕ್ತಿ ತೋರ್ಪಡಿಕೆಯ ವಿಷಯವಾಗಿರಬಾರದು; ಅದು ಹೃದಯದಲ್ಲಿ ನೆಲೆಸಿ ಆಚರಣೆಯಾಗಿ ವ್ಯಕ್ತವಾಗಬೇಕು. ಮುಂದಿನ ಪೀಳಿಗೆಗೆ ಧಾರ್ಮಿಕ ಮೌಲ್ಯಗಳನ್ನು ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಆಚಾರ್ಯ ಪುಣ್ಯಸಾಗರ ಮುನಿಗಳು ಆಶೀರ್ವಚನ ನೀಡಿ, ಜೈನ ಧರ್ಮದಲ್ಲಿ ಜನಿಸಿದವರು ಪುಣ್ಯಶಾಲಿಗಳು. ಜೀವನದಲ್ಲಿ ಸತ್ಯದ ಮಾರ್ಗದಲ್ಲಿ ನಡೆಯಬೇಕು. ಮನಸ್ಸು ಮತ್ತು ಇಂದ್ರಿಯಗಳನ್ನು ಜಯಿಸಿದವರೇ ನಿಜವಾದ ವೀರರು ಎಂದರು.

ಕಂಬದಳ್ಳಿ ದಿಗಂಬರ ಜೈನ ಮಠದ ಭಾನುಕೀರ್ತಿ ಸ್ವಾಮಿಗಳು ಆಶೀರ್ವಚನ ನೀಡಿ, ಪ್ರತಿಯೊಬ್ಬರೂ ಅಹಿಂಸೆಯ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೈನ ಧರ್ಮದ ವಿಚಾರಧಾರೆಗಳು ಜೀವನ ಸಾಕ್ಷಾತ್ಕಾರಕ್ಕೆ ಅತ್ಯಂತ ಅಗತ್ಯವೆಂದು ಹೇಳಿದರು.

ಸ್ವಾಧಿ ಜೈನ ಮಠದ ಭಟ್ಟಾಕಲಂಕ ಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಬಬಿತಾ ಪ್ರೇಮಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಾಗರಾಜ್ ಜೈನ್ (ಅತ್ತಿಗೋಡು), ಧನಪಾಲ್ ಜೈನ್ (ಕಾರ್ಗಲ್), ಧನಪಾಲ್ ಜೈನ್ (ಮಂಡವಳ್ಳಿ), ಅನಿಲ್ ಜೈನ್ (ಹೆನ್ನಿ), ಲೋಕರಾಜ್ ಜೈನ್ (ಮರಬೀಡಿ), ಯೋಗರಾಜ್ ಜೈನ್ (ಅತ್ತಿಗೋಡು), ಪ್ರಶಾಂತ್ ಸಾಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.