Home Blog ಮಲೆನಾಡಲ್ಲಿ ಹೆಚ್ಚಿನದಾಗಿ ಹಾವು ಕಡಿತದಿಂದ ಸಾವು /ಹಾವು ಕಚ್ಚಿದಾಗ ಏನು ಮಾಡಬೇಕು..? ಏನು ಮಾಡಬಾರದು..?

ಮಲೆನಾಡಲ್ಲಿ ಹೆಚ್ಚಿನದಾಗಿ ಹಾವು ಕಡಿತದಿಂದ ಸಾವು /ಹಾವು ಕಚ್ಚಿದಾಗ ಏನು ಮಾಡಬೇಕು..? ಏನು ಮಾಡಬಾರದು..?

69
0

✒️..ಅಮಿತ್ ಆರ್ ಆನಂದಪುರ

ಮಲೆನಾಡು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಹಾವು ಕಡಿತದಿಂದ ಬಹಳಷ್ಟು ಜನ ಮೃತಪಟ್ಟಿರುವುದಾಗಿ ವರದಿಯಾಗುತ್ತಿದೆ ,ಅದರಲ್ಲೂ ಸರಿಯಾದ ಚಿಕಿತ್ಸೆ ಸಿಗದೆ ಬಹಳಷ್ಟು ಜನ ಕೆಲ ಮೂಢನಂಬಿಕೆಗಳಿಗೆ ಒಳಗಾಗಿ ಮೃತಪಟ್ಟವರ ಪ್ರಕರಣವು ಸಹ ಹೆಚ್ಚಾಗುತ್ತಿರುವುದು ಆರೋಗ್ಯ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ.

ಗ್ರಾಮೀಣ ಭಾಗದಲ್ಲಿ ಹಾವು ಕಚ್ಚಿದ ತಕ್ಷಣ ಪ್ರತಿಯೊಬ್ಬ ವ್ಯಕ್ತಿಯೂ ಸಹ ಗಾಬರಿಯಾಗುವುದು ಸಹಜವಾಗಿರುತ್ತದೆ ಆದರೆ ಹೀಗೆ ಗಾಬರಿಯಾದಾಗ ವಿಷವು ರಕ್ತದ ಮೂಲಕ ದೇಹದಾದ್ಯಂತ ವೇಗವಾಗಿ ಹರಡುತ್ತದೆ ಆದ್ದರಿಂದ ವ್ಯಕ್ತಿಯನ್ನು ಆದಷ್ಟು ಸಮಾಧಾನಗೊಳಿಸಬೇಕು.

ಸಾಂದರ್ಭಿಕ ಚಿತ್ರ..

ಹಾವು ಕಚ್ಚಿದ ಭಾಗವನ್ನು ಜಾಸ್ತಿ ಅಲುಗಾಡಿಸಬಾರದು, ಹಾಗೆ ಪ್ರಮುಖವಾಗಿ ಮೂಢನಂಬಿಕೆಗಳಿಗೆ ಒಳಗಾಗಿ ಮಂತ್ರ – ತಾಯಿತಾ ಅಥವಾ ಬೇರು – ಸೊಪ್ಪುಗಳ ಮದ್ದಿನ ಮೊರೆ ಹೋಗಬಾರದು, ಇದರಿಂದ ಸಮಯ ವ್ಯರ್ಥವಾಗುತ್ತದೆ ಹಾಗೂ ಜೀವವು ಕೈಮೀರಿ ಹೋಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇದರಿಂದ ಆನೇಕ ಪ್ರಾಣ ಹಾನಿಗಳು ಸಂಭವಿಸಿದ ಉದಾಹರಣೆ ಇವೆ.

ಚಲನಚಿತ್ರಗಳಲ್ಲಿ ತೋರಿಸುವಂತೆ ಬಾಯಿಯಿಂದ ವಿಷ ಹೀರಲು ಪ್ರಯತ್ನಿಸಬಾರದು ಇದು ಅಪಾಯಕಾರಿಯಾಗಿರುತ್ತದೆ ಹಾಗೂ ಕಚ್ಚಿದ ಭಾಗಕ್ಕೆ ಬಿಗಿಯಾಗಿ ಬಟ್ಟೆ ಕಟ್ಟಬಾರದು ಇದರಿಂದ ರಕ್ತ ಸಂಚಾರ ನಿಂತು ಆ ಅಂಗವನ್ನೇ ಕತ್ತರಿಸಬೇಕಾದ ಪರಿಸ್ಥಿತಿ ಬರಬಹುದು ಇದರಿಂದ ಈ ಪದ್ಧತಿ ತಪ್ಪು ಎಂದು ವೈದ್ಯಕೀಯವಾಗಿ ಸಾಬೀತಾಗಿದೆ. ಅದಲ್ಲದೆ ಕಚ್ಚಿದ ಜಾಗಕ್ಕೆ ಬ್ಲೇಡ್ ನಿಂದ ಕುಯ್ಯುವುದು ಅಂತಹ ಸಾಹಸಕ್ಕೆ ಕೈ ಹಾಕಬಾರದು ಎನ್ನುವುದು ಆರೋಗ್ಯ ಇಲಾಖೆಯ ತಜ್ಞರ ವಾದವಾಗಿದೆ.

ಸಾಂದರ್ಭಿಕ ಚಿತ್ರ.

ಹಾವು ಕಚ್ಚಿದ ತಕ್ಷಣ ಹಾವಿನ ಬಣ್ಣ ಅಥವಾ ಆಕಾರ ನೆನಪಿಟ್ಟುಕೊಂಡು ಯಾವುದೇ ರೀತಿಯ ಸಮಯ ವ್ಯರ್ಥವನ್ನು ಮಾಡದೆ ಹಾವು ಕಚ್ಚಿದ ಒಂದು ಗಂಟೆಯೊಳಗೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಬೇಕು, ಈ ಸಮಯದಲ್ಲಿ ವಿಷ ರಕ್ತದ ಮೂಲಕ ಹೃದಯ, ಮೆದುಳು, ಕಿಡ್ನಿ ಪ್ರಮುಖ ಅಂಗಗಳಿಗೆ ಅಷ್ಟಾಗಿ ಹರಡಿರುವುದಿಲ್ಲ ಆಗ Anti-Snake Venom ( ಹಾವಿನ ವಿಷನಿರೋಧಕ ) ಬಳಕೆ ಮಾಡಿ ವೈದ್ಯರು ವ್ಯಕ್ತಿಯನ್ನು ಬದುಕಿಸಲು ಮುಂದಾಗುತ್ತಾರೆ.

ಗರಿಷ್ಠವಾಗಿ ವ್ಯಕ್ತಿಗೆ ಮೂರರಿಂದ ನಾಲ್ಕು ಗಂಟೆ ಒಳಗೆ ಚಿಕಿತ್ಸೆ ಸಿಗಲೇಬೇಕು ಸಮಯ ಕಳೆದಂತೆ ವಿಷವು ರಕ್ತ ಕಣಗಳನ್ನು ಅಥವಾ ನರಮಂಡಲವನ್ನು ಹಾನಿ ಮಾಡಿ ಚಿಕಿತ್ಸೆ ಕಷ್ಟಕಾರವಾಗುತ್ತದೆ.

ಪ್ರಥಮ ಚಿಕಿತ್ಸೆ ಹೇಗೇ..?
ಹಾವು ಕಚ್ಚಿದ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಹುತೇಕ ಮಲೆನಾಡು ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಹ ಉಚಿತವಾಗಿ Anti-Snake Venom (ಹಾವಿನ ವಿಷನಿರೋಧಕ) ಔಷಧಿಗಳು ಲಭ್ಯವಿರುತ್ತದೆ ದೊಡ್ಡ ನಗರದ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಸಮಯ ವ್ಯರ್ಥ ಮಾಡಲು ಬದಲು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಮೊದಲು ಹೋಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ಇದರಿಂದ ಹಾವಿನ ವಿಷವು ದೇಹದ ಇತರೆ ಭಾಗಕ್ಕೆ ವ್ಯಾಪಿಸದಂತೆ ತಡೆಯಬಹು ಹಾಗೂ ಕಡಿತಕ್ಕೆ ಒಳಗಾದ ವ್ಯಕ್ತಿಯು ನಿದ್ರಿಸದಂತೆ ನೋಡಿಕೊಳ್ಳಬೇಕು.

ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದೇನು..?

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ ನಟರಾಜ್ ಮಲೆನಾಡು ಭಾಗದಲ್ಲಿ ಹಾವು ಕಡಿತದಿಂದ ಮೃತಪಟ್ಟವರ ಸಂಖ್ಯೆ ಅಧಿಕವಾಗುತ್ತಿರುವ ಸಂಗತಿ ಗಮನಕ್ಕೆ ಬಂದಿದೆ,ಇಂತಹ ಸಮಯದಲ್ಲಿ ಜನರು ಸಾಕಷ್ಟು ಸಂವೇದನೆಯಿಂದ ಜಾಗೃತಿ, ಎಚ್ಚರಿಕೆ ವಹಿಸಬೇಕು. ಅಗತ್ಯವಿದೆ.ಹಾವು ಕಡಿತ ಸಂದರ್ಭದಲ್ಲಿ ತಕ್ಷಣವೇ ಸಮೀಪದ ಸರ್ಕಾರಿ ಅಸ್ಪತ್ರೆಗೆ ವೈದ್ಯರನ್ನು ಸಂಪರ್ಕಿಸಬೇಕು. ನಾಟಿ ಔಷಧಿ ಮೊರೆ ಹೋಗುವುದು, ತಾವೇ ಸ್ವಯಂ ಔಷಧಿ ಪಡೆಯುವುದು ಆರೋಗ್ಯಯುತವಾದ ಕ್ರಮವಲ್ಲ. ಜಿಲ್ಲಾಧ್ಯಂತ ಹಾವಿನ ವಿಷ ನಿರೋಧಕ (Anti-snake venom) ಔಷಧಿಯನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಪೂರೈಕೆ ಮಾಡಲಾಗಿದೆ ಇದನ್ನು ಬಳಸಿ ಬಳಸಿಕೊಂಡರೆ ಹಾವು ಕಡಿತಕ್ಕೆ ಒಳಗಾದವರ ಜೀವ ಉಳಿಸಲು ಸಾಧ್ಯ ಇದೆ.