ಸಾಗರ: ಕಾಗೋಡು ಚಳುವಳಿಯ 75ನೇ ವರ್ಷದ ನೆನಪಿನ ಅಂಗವಾಗಿ ಇಲ್ಲಿ ಶೃಂಗೇರಿ ಶಂಕರ ಮಠದಲ್ಲಿ ಭಾನುವಾರ ಭಾವಪೂರ್ಣ ಕಾರ್ಯಕ್ರಮ ನಡೆಯಿತು. ಡಾ. ಎಚ್. ಗಣಪತಿಯಪ್ಪ ಸೇವಾ ಟ್ರಸ್ಟ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಧಾನ ಉಪನ್ಯಾಸ ನೀಡಿದ ಸಮಾಜವಾದಿ ಚಿಂತಕ ಬಿ.ಆರ್. ಜಯಂತ್, “ಹೋರಾಟಗಳು ನಿತ್ಯ ಜೀವನದಲ್ಲಿ ಜೀವಂತವಾಗಿರಬೇಕು. ಮನುಷ್ಯನ ಬದುಕನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯಲು ಹಾಗೂ ಸಾಮಾಜಿಕ ನ್ಯಾಯ ಸಾಧಿಸಲು ಹೋರಾಟಗಳು ಅತ್ಯಂತ ಅಗತ್ಯ” ಎಂದು ಹೇಳಿದರು.
ಗಾಂಧೀಜಿಯವರ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರೆತಂತೆ, ಭೂ ರಹಿತ ರೈತರಿಗೆ ಭೂಮಿ ಒದಗಿಸುವ ನಿಟ್ಟಿನಲ್ಲಿ ಕಾಗೋಡು ಚಳುವಳಿ ಮಹತ್ವದ ಪಾತ್ರವಹಿಸಿದೆ. ಈ ಚಳುವಳಿಗೆ ಡಾ. ಎಚ್. ಗಣಪತಿಯಪ್ಪ ಪ್ರಮುಖ ರೂವಾರಿಯಾಗಿದ್ದು, ಅವರ ಹೋರಾಟಗಳು ದೇಶದಾದ್ಯಂತ ಪ್ರಭಾವ ಬೀರಿವೆ ಎಂದು ಅವರು ವಿವರಿಸಿದರು.ಇದೇ ಸಂದರ್ಭದಲ್ಲಿ ಲೋಹಿಯಾ, ಗೋಪಾಲಗೌಡರು, ಕಾಗೋಡು ತಿಮ್ಮಪ್ಪ ಹಾಗೂ ದೇವರಾಜ ಅರಸು ಅವರಂತಹ ನಾಯಕರು ಭೂ ಹಕ್ಕಿಗಾಗಿ ಮಾಡಿದ ಹೋರಾಟಗಳನ್ನು ಸ್ಮರಿಸಿದರು. “ಉಳುವವನೇ ಹೊಲದೊಡೆಯ” ಎಂಬ ತತ್ವವನ್ನು ಸ್ಥಾಪಿಸುವಲ್ಲಿ ಕಾಗೋಡು ಚಳುವಳಿ ಮಹತ್ವದ ಪಾತ್ರವಹಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಎಚ್. ಗಣಪತಿಯಪ್ಪ ನೇಗಿಲಯೋಗಿ ರಾಜ್ಯಮಟ್ಟದ ಪ್ರಶಸ್ತಿಯನ್ನು ಹೊಸನಗರದ ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರಿಗೆ ಪ್ರದಾನ ಮಾಡಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ. ಸ್ವಾಮಿರಾವ್, “ಇದು ನನ್ನ ಜೀವನದ ಸಾರ್ಥಕ ಕ್ಷಣ. ಜನರ ಪರವಾಗಿ ಹಲವು ದಶಕಗಳ ಕಾಲ ಹೋರಾಟ ನಡೆಸಿದ್ದೇನೆ. ಆ ಹೋರಾಟಗಳಿಗೆ ಗಣಪತಿಯಪ್ಪರಂತಹ ಮಹಾನ್ ವ್ಯಕ್ತಿಗಳೇ ಪ್ರೇರಣೆ. ಅವರ ಆಶಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, “ಭೂ ಹಕ್ಕಿಗಾಗಿ ನಡೆದ ಕಾಗೋಡು ಚಳುವಳಿ ಇತಿಹಾಸದಲ್ಲಿ ಮಹತ್ವ ಪಡೆದಿದೆ. ಇಂತಹ ಹೋರಾಟಗಳ ಅರಿವು ಯುವಜನತೆಗೆ ಮೂಡಿಸುವುದು ಅಗತ್ಯ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ವಿ.ಟಿ. ಸ್ವಾಮಿ, ಅಶ್ವಿನಿ ಕುಮಾರ್, ಟಿ.ವಿ. ಪಾಂಡುರಂಗ, ತೀ.ನಾ. ಶ್ರೀನಿವಾಸ್, ಜಿ. ನಾಗೇಶ್, ಸುಬ್ರಮಣ್ಯ ಭಟ್, ಲೋಕೇಶ್ ಕುಮಾರ್, ಕಿರಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಹಿರಿಯ ಗಾಯಕ ವಸಂತ್ ಕುಗ್ವೆ ಮತ್ತು ರಾಜು ಜನ್ನೆಹಕ್ಕಲು ಹೋರಾಟದ ಗೀತೆಗಳನ್ನು ಹಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.














