Home Shivamogga Sagara ಸ್ವಾಮೀಜಿ ಯವರು ಸಮಾಜದ ನಾಯಕರಿಗೆ ಸಚಿವ ಸ್ಥಾನ ಕುರಿತು ಮಾತನಾಡಬೇಕು, ಒಬ್ಬ ವ್ಯಕ್ತಿಯ ಪರವಾಗಿ ಅಲ್ಲ:...

ಸ್ವಾಮೀಜಿ ಯವರು ಸಮಾಜದ ನಾಯಕರಿಗೆ ಸಚಿವ ಸ್ಥಾನ ಕುರಿತು ಮಾತನಾಡಬೇಕು, ಒಬ್ಬ ವ್ಯಕ್ತಿಯ ಪರವಾಗಿ ಅಲ್ಲ: ರತ್ನಾಕರ ಹೋನಗೋಡು..!!

54
0

✒️..ಅಮಿತ್ ಆರ್ ಆನಂದಪುರ

ಆನಂದಪುರ, ಜೂ.12: ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಈಡಿಗ ಸಮಾಜದ ಪ್ರಸಿದ್ಧ ಧಾರ್ಮಿಕ ಮುಖಂಡ ಪ್ರಾಣಾವನಂದ ಸ್ವಾಮೀಜಿಯವರು ಸಮಾಜದ ಪರವಾಗಿ ನಿಲ್ಲಬೇಕೇ ಹೊರತು ವ್ಯಕ್ತಿಯ ಪರವಾಗಿ ನಿಲ್ಲುವುದು ಖಂಡನೀಯ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೋನಗೋಡು ಅಸಮಾಧಾನ ವ್ಯಕ್ತಪಡಿಸಿದರು.

ಆನಂದಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಗೋಕರ್ಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವಂತೆ ಅವರೊಬ್ಬರ ಪರವಾಗಿ ಪ್ರಾಣಾವನಂದ ಸ್ವಾಮೀಜಿಯವರು ಸರ್ಕಾರವನ್ನು ಒತ್ತಾಯಿಸಿರುವುದನ್ನು ಪರೋಕ್ಷವಾಗಿ ವಿರೋಧಿಸಿದರು.

ಸ್ವಾಮೀಜಿಯವರು ನಮ್ಮ ಸ್ವಾರ್ಥದಿಂದ ಸರ್ಕಾರಕ್ಕೆ ನಮ್ಮ ಸಮಾಜದ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡುವ ಬದಲು ಒಬ್ಬ ವ್ಯಕ್ತಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿರುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬ ಪ್ರಶ್ನೆಯನ್ನು ಎತ್ತಿದರು.

ಸ್ವಾಮೀಜಿಯವರು ಯಾವುದೇ ಒಂದು ವ್ಯಕ್ತಿಯ ಪರವಾಗಿ ಅಲ್ಲದೆ, ಅಧಿಕಾರದಲ್ಲಿರುವ ಸಮಾಜದ ನಾಯಕರಿಗೆ ಸೂಕ್ತ ಸ್ಥಾನಮಾನ ದೊರೆಯುವಂತೆ ಒತ್ತಾಯಿಸಬೇಕಿತ್ತು. ಆದರೆ ಸ್ವಾರ್ಥಪೂರಿತವಾಗಿ ನಿರ್ದಿಷ್ಟ ವ್ಯಕ್ತಿಯ ಪರವಾಗಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಅವರು ಹೇಳಿದರು.

ನಮ್ಮ ಸಮಾಜದ ಜನರು ವಿವಿಧ ರಾಜಕೀಯ ಪಕ್ಷಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಯಾವ ಪಕ್ಷ ಅಧಿಕಾರದಲ್ಲಿದೆಯೋ ಆ ಪಕ್ಷದಲ್ಲಿರುವ ಸಮಾಜದ ನಾಯಕರಿಗೆ ಅಧಿಕಾರ ಮತ್ತು ಅವಕಾಶಗಳನ್ನು ನೀಡುವಂತೆ ಕೇಳುವುದು ಸಮಂಜಸ. ಆದರೆ ಇಂತಹ ಹೇಳಿಕೆಗಳು ಸಮಾಜದೊಳಗೆ ಭಿನ್ನಾಭಿಪ್ರಾಯ ಸೃಷ್ಟಿಸುವ ಹಾಗೂ ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರದಲ್ಲಿರುವ ನಮ್ಮ ಸಮಾಜದ ಯಾವುದೇ ನಾಯಕರಿಗೆ ಸಚಿವ ಸ್ಥಾನ ದೊರೆತರೂ ನಮಗೆ ಸಂತೋಷವೇ. ಆದರೆ ಪ್ರಾಣಾವನಂದ ಸ್ವಾಮೀಜಿಯವರು ವ್ಯಕ್ತಿಪರವಾಗಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ರತ್ನಾಕರ ಹೋನಗೋಡು ಹೇಳಿದರು.

ಗೌತಮಪುರ ಗ್ರಾಪಂ.ಮಾಜಿ ಉಪಾಧ್ಯಕ್ಷ ಅಶೋಕ್ ಮಾತನಾಡಿ ಸ್ವಾಮೀಜಿಯವರು ವೈಯಕ್ತಿಕವಾಗಿ ನಿರ್ದಿಷ್ಟವಾಗಿ ಇಂತವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿರುವುದು ಸರಿಯಲ್ಲ ಇದು ನಮ್ಮ ಸಮಾಜಕ್ಕೆ ಶೋಭೆ ತರುವಂತದ್ದಲ್ಲ ಇದನ್ನು ನಮ್ಮ ಆರ್ಯ ಈಡಿಗ ಸಂಘ ಮತ್ತು ನಮ್ಮ ಸಮಾಜ ಬಾಂಧವರು ವಿರೋಧಿಸುತ್ತೇವೆ ಎಂದರು.

ಗೌತಮಪುರ ಗ್ರಾಪಂ.ಮಾಜಿ ಅಧ್ಯಕ್ಷರಾದ ಹಿರಿಯಣ್ಣ ಸಂಗಣ್ಣಕೆರೆ ಮಾತನಾಡಿ ಸ್ವಾಮಿಜಿ ಅವರ ನಡೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪರಮೇಶಿ ಕಣ್ಣೂರು, ಶಿವಕುಮಾರ್, ಚಂದ್ರು,ಅರವಿಂದ ತಳಗೆರೆ ಉಪಸ್ಥಿತರಿದ್ದರು.