✒️..ಅಮಿತ್ ಆರ್ ಆನಂದಪುರ
ಹೊಸನಗರ: ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರದ ಕಲ್ಲೂರು ಗ್ರಾಮದ ಬಸವಣ್ಣ ದೇವಸ್ಥಾನ ಆವರಣದಲ್ಲಿ ವಿಜಯನಗರ ಕಾಲದ ಅಪರೂಪದ ನಂದಿಗಂಬ ದಾನ ಶಾಸನ ಪತ್ತೆಯಾಗಿದ್ದು, ಸ್ಥಳೀಯ ಇತಿಹಾಸ ಅಧ್ಯಯನಕ್ಕೆ ಮಹತ್ವದ ದಾಖಲೆ ದೊರೆತಿದೆ.
ಸಂಶೋಧಕರಾದ ಆದಿತ್ಯ ನಂಜವಳ್ಳಿ, ಗಣೇಶ್ ಕೆ.ಎನ್ ಹಾಗೂ ಪತ್ರಕರ್ತ ಎನ್. ಕಾರ್ತಿಕ್ ಕೌಂಡಿನ್ಯ ಅವರು ಈ ಶಾಸನವನ್ನು ಪತ್ತೆಹಚ್ಚಿ ಅಧ್ಯಯನ ನಡೆಸಿದ್ದಾರೆ. ಪ್ರಾಥಮಿಕ ಅಧ್ಯಯನದ ಪ್ರಕಾರ, ಈ ಶಾಸನವು ವಿಜಯನಗರ ಸಾಮ್ರಾಜ್ಯದ ಸಂಗಮ ವಂಶದ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ.
ಶಾಸನದಲ್ಲಿ ಕಲ್ಲೂರು ಗ್ರಾಮವನ್ನು “ಕಲೂರ ನಾಡು” ಎಂದು ಉಲ್ಲೇಖಿಸಲಾಗಿದ್ದು, ಈ ಭಾಗದ ಐತಿಹಾಸಿಕ ಹಿನ್ನೆಲೆಗೆ ಮತ್ತಷ್ಟು ದೃಢತೆ ಸಿಕ್ಕಿದೆ. ಶಾಸನದ ವಿವರಗಳ ಪ್ರಕಾರ, ಕ್ರಿ.ಶ. 1424 (ಶಕ 1346)ರಲ್ಲಿ ಎರಡನೇ ದೇವರಾಯನ ಆಳ್ವಿಕೆಯಲ್ಲಿ ಈ ದಾನ ನಡೆದಿದ್ದು, ಆರಗನಾಡಿನ ವ್ಯಾಪ್ತಿಗೆ ಸೇರಿದ ಕಲೂರನಾಡನ್ನು ಹಂಪಿಯ ಪ್ರಸಿದ್ಧ ವಿರೂಪಾಕ್ಷ ದೇವರಿಗೆ ಅಮೃತಪಡಿ (ನೈವೇದ್ಯ) ಸೇವೆಗಾಗಿ ದಾನವಾಗಿ ನೀಡಲಾಗಿದೆ.

ಇದು ಆ ಕಾಲದಲ್ಲಿ ದೇವಾಲಯಗಳ ನಿರ್ವಹಣೆ ಮತ್ತು ಪೂಜಾ ಕಾರ್ಯಗಳಿಗೆ ಭೂದಾನದ ಮಹತ್ವವನ್ನು ತೋರಿಸುತ್ತದೆ. ಶಾಸನದಲ್ಲಿ ವಿಜಯನಗರ ಅರಸರಾದ ಮೂರನೇ ಬುಕ್ಕರಾಯರನ್ನು “ಮಹಾರಾಜಾದಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ವಿಜಯಬುಕ್ಕರಾಯ” ಎಂದು, ಎರಡನೇ ದೇವರಾಯರನ್ನು “ವೀರಪ್ರತಾಪದೇವರಾಯ ಮಹಾರಾಯ” ಎಂದು ಕೊಂಡಾಡಲಾಗಿದೆ.
ಇದಲ್ಲದೆ, ಕಲೂರನಾಡಿನ ಗಡಿಭಾಗಗಳಾಗಿ ಒಡರಸುಳಿ (ವಡಾಹೊಸಳ್ಳಿ), ಬಿದರಹಳ್ಳಿ, ತೆಳಲ (ತಳಲೆ), ಕಣಬಂದೂರು, ಕರಡಿಗ ಹಾಗೂ ಕಕರಿಯ ಗ್ರಾಮಗಳ ಉಲ್ಲೇಖವಿದ್ದು, ಅಂದಿನ ಭೌಗೋಳಿಕ ವ್ಯಾಪ್ತಿ ಮತ್ತು ಆಡಳಿತ ವ್ಯವಸ್ಥೆಯ ಬಗ್ಗೆ ಅಮೂಲ್ಯ ಮಾಹಿತಿ ನೀಡುತ್ತದೆ.
ಈ ಶಾಸನ ಪತ್ತೆಯಿಂದ ವಿಜಯನಗರ ಕಾಲದ ಧಾರ್ಮಿಕ ದಾನ ಸಂಪ್ರದಾಯ, ಗ್ರಾಮೀಣ ಆಡಳಿತ ವ್ಯವಸ್ಥೆ ಹಾಗೂ ಸ್ಥಳೀಯ ಇತಿಹಾಸದ ಕುರಿತಾಗಿ ಹೆಚ್ಚಿನ ಮಾಹಿತಿ ದೊರೆಯಲಿದ್ದು, ಈ ಭಾಗದ ಪುರಾತತ್ವ ಮಹತ್ವವೂ ಹೆಚ್ಚಾಗಿದೆ.
ಈ ಸಂದರ್ಭದಲ್ಲಿ ಬಸವಣ್ಣ ದೇವಸ್ಥಾನದ ಅಧ್ಯಕ್ಷ ನಾಗರಾಜ್ ವೈ.ಟಿ, ಗೌರವಾಧ್ಯಕ್ಷ ವೀರಭದ್ರಪ್ಪ ಗೌಡ, ಗಿರಿರಾಜ್ ಗೌಡ, ಮಂಜುನಾಥ್, ಆದರ್ಶ ಕಲ್ಲೂರು, ಶಿವಣ್ಣ, ಚಂದ್ರಹಾಸ, ಮಲ್ಲಿಕಾರ್ಜುನ, ದಾನಪ್ಪ, ಆದರ್ಶ ಮೂಗುಡ್ತಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

“ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಆರಗನಾಡು ಇದ್ದ ಕಾರಣ, ಈ ಭಾಗದ ಕೆಲವು ಪ್ರದೇಶಗಳನ್ನು ದಾನವಾಗಿ ನೀಡಿರುವುದನ್ನು ಹಲವು ಶಾಸನಗಳು ಸೂಚಿಸುತ್ತವೆ. ಈಗ ಪತ್ತೆಯಾದ ಈ ಶಾಸನದಿಂದ ರಾಜಕೀಯ ಮಾಹಿತಿಯ ಜೊತೆಗೆ ಸ್ಥಳೀಯ ಗ್ರಾಮಗಳ ಗಡಿಗಳ ವಿವರ ದೊರೆತಿದ್ದು, ಅಧ್ಯಯನದ ದೃಷ್ಟಿಯಿಂದ ಮಹತ್ವದ್ದಾಗಿದೆ.”
— ಆದಿತ್ಯ ನಂಜವಳ್ಳಿ, ಸಂಶೋಧಕ
“ನಮ್ಮ ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ಇಷ್ಟು ಹಳೆಯ ವಿಜಯನಗರ ಕಾಲದ ಶಾಸನ ಪತ್ತೆಯಾಗಿರುವುದು ಹೆಮ್ಮೆಯ ವಿಷಯ. ಇದರಿಂದ ಕಲೂರ ನಾಡಿನ ಇತಿಹಾಸ ಎಲ್ಲರಿಗೂ ತಿಳಿಯುವಂತಾಗಿದೆ.”
— ವೀರಭದ್ರಪ್ಪ ಗೌಡ, ಸ್ಥಳೀಯ













