✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ,ಮೇ.26: ರಾಜ್ಯದ ಶಾಲಾಮಟ್ಟದಲ್ಲಿ ಲಿಂಗ ಸಮಾನತೆಯ ಪಾಠಗಳನ್ನು ಪರಿಚಯಿಸಬೇಕು ಎಂದು ಸಮೃದ್ ಸ್ವ-ಸಹಾಯ ಸಂಘಗಳ ತಾಲ್ಲೂಕು ಒಕ್ಕೂಟ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಸಮಾಜದ ಸಮಗ್ರ ಅಭಿವೃದ್ಧಿಗೆ ಲಿಂಗ ಸಮಾನತೆ ಅತ್ಯಂತ ಅವಶ್ಯಕವಾಗಿದೆ. ಮಕ್ಕಳ ಮನೋವಿಕಾಸದ ಧಾರ್ಮಿಕ ಹಂತವೇ ಶಾಲಾ ಶಿಕ್ಷಣವಾಗಿರುವುದರಿಂದ ಶಾಲಾ ಮಟ್ಟದಲ್ಲಿ ಲಿಂಗ ಸಮಾನತೆ ಕುರಿತು ಸೂಕ್ತ ಅರಿವು ಮತ್ತು ಮೌಲ್ಯಗಳನ್ನು ಬೆಳೆಸಬೇಕಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಲಿಂಗ ಸಮಾನತೆಯ ಪಾಠಗಳನ್ನು ಮಕ್ಕಳಿಗೆ ಶಿಕ್ಷಣದ ಮೂಲಕ ಪರಿಚಯಿಸಬೇಕಾಗಿದೆ ಎಂದು ಮನವಿದಾರರು ತಿಳಿಸಿದರು.
ಶಿಕ್ಷಣ ಮತ್ತು ಸಂಸ್ಕೃತಿ ಎರಡೂ ನಾಗರೀಕತೆಯ ಬುನಾದಿ ಇದ್ದಂತೆ. ಸೌಹಾರ್ಧತೆಯಿಂದ ಬಾಳಲು ಶಿಕ್ಷಣವೇ ಮುಖ್ಯವಾಗು ಇದೆ. ಆದರೆ ನಮ್ಮ ಶಾಲೆಗಳಲ್ಲಿ ಬಾಲಕ-ಬಾಲಕಿಯರ ನಡುವೆ ತಾರತಮ್ಯ ಇರುವುದು ಸಹಜವೇ ಆಗಿದೆ. ಹಾಗಾಗಿ ಪಠ್ಯಪುಸ್ತಕ, ತರಗತಿಯ ಸನ್ನಿವೇಶ ಮುಂತಾದ ವಿಷಯಗಳಲ್ಲಿ ಲಿಂಗ ತಾರತಮ್ಯ ಇರಬಾರದು.
ಹುಡುಗ ಮತ್ತು ಹುಡುಗಿಯರ ನಡುವೆ ಪರಸ್ಪರ ಗೌರವವನ್ನು ಉತ್ತೇಜಿಸುವ ಚಟುವಟಿಕೆಗಳನ್ನು ರೂಪಿಸುವುದು ಅತ್ಯಗತ್ಯವಾಗಿದೆ. ಹಾಗಾಗಿ ಲಿಂಗ ಸಮಾನತೆ ಲಿಂಗತ್ವ ಸೂಕ್ಷ್ಮತೆಯ ವಿಚಾರಗಳನ್ನು ಶಾಲಾ ಶಿಕ್ಷಣದ ಪ್ರಾರಂಭಿಕ ಹಂತದಲ್ಲಿಯೇ ಪಠ್ಯಗಳಲ್ಲಿ ಅಳವಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದರಿಂದ ವಿದ್ಯಾರ್ಥಿಗಳಲ್ಲಿ ಸಮಾನತೆ ಹಾಗೂ ಮಾನವೀಯ ಮೌಲ್ಯಗಳು ಬದಲಾಗುತ್ತವೆ. ಪರಸ್ಪರ ಗೌರವ ಉಂಟಾಗುತ್ತದೆ. ಪ್ರಗತಿಶೀಲ ಸಮಾಜ ನಿರ್ಮಾಣಕ್ಕೆ ದಾರಿಯಾಗುತ್ತದೆ. ಆದ್ದರಿಂದ ಲಿಂಗ ಸಮಾನತೆಯ ಪಾಠಗಳನ್ನು ಶಾಲಾ ಮಟ್ಟದಲ್ಲಿಯೇ ಪರಿಚಯಿಸಬೇಕು ಎಂದು ಮನವಿದಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮೃದ್ ಸ್ವ-ಸಹಾಯ ಸಂಘಗಳ ತಾಲ್ಲೂಕು ಒಕ್ಕೂಟದ ಅಧ್ಯಕ್ಷೆ ಶೋಭಾ ಜಿ., ಪ್ರಮುಖರಾದ ರೂಪ, ಮಂಜುಳಾ, ಶೀಲ, ಶಮೀನಾಬಾನು, ಶ್ರೀಲತ, ಆಶ, ನೂರ್ ಫಾತೀಮಾ, ಮಂಜುಳಾ, ಜುಬೇದ, ಶಾಹೀನಾ,ಸುಲ್ತಾನ್ ಸೇರಿದಂತೆ ಹಲವರಿದ್ದರು.
















