ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಈಗ ಅಂತಿಮ ಘಟ್ಟಕ್ಕೆ ತಲುಪಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಈಗ ಅಧಿಕೃತಗೊಂಡಿದೆ.
ರಾಜ್ಯಪಾಲರಿಂದ ಅಧಿಕೃತ ಆಹ್ವಾನ:
ಮೇ 30 ರಂದು (ಇಂದು) ಡಿ.ಕೆ. ಶಿವಕುಮಾರ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಪುರಸ್ಕರಿಸಿರುವ ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು, ಡಿ.ಕೆ. ಶಿವಕುಮಾರ್ ಅವರಿಗೆ ಸರ್ಕಾರ ರಚಿಸಲು ಮತ್ತು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅಧಿಕೃತವಾಗಿ ಆಹ್ವಾನ ನೀಡಿದ್ದಾರೆ.ಈ ಕುರಿತು ರಾಜ್ಯಪಾಲರ ಕಾರ್ಯಾಲಯದಿಂದ ಅಧಿಕೃತ ಪತ್ರ ಬಿಡುಗಡೆಯಾಗಿದೆ.

ಜೂನ್ 3ಕ್ಕೆ ಮುಹೂರ್ತ ನಿಗದಿ:
ರಾಜ್ಯಪಾಲರ ಆಹ್ವಾನದನ್ವಯ, ಬರುವ ಜೂನ್ 3, 2026 ರಂದು ಸಂಜೆ 04:05 ಕ್ಕೆ ಬೆಂಗಳೂರಿನ ಲೋಕಭವನದ ಆವರಣದಲ್ಲಿ ಭವ್ಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜರುಗಲಿದೆ. ಡಿ.ಕೆ. ಶಿವಕುಮಾರ್ ಅವರೊಂದಿಗೆ ಅವರ ನೂತನ ಸಂಪುಟದ ಪ್ರಮುಖ ಸಹೋದ್ಯೋಗಿಗಳು ಮತ್ತು ಸಚಿವರು ಕೂಡ ಅಂದೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದು, ಈಗ ರಾಜ್ಯದ ಚುಕ್ಕಾಣಿ ಅಧಿಕೃತವಾಗಿ ‘ಟ್ರಬಲ್ ಶೂಟರ್’ ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರ ಕೈ ಸೇರಲಿದೆ.
ಜೂನ್ 3 ರಂದು ನಡೆಯಲಿರುವ ಈ ಐತಿಹಾಸಿಕ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಸಾಕ್ಷಿಯಾಗಲಿದ್ದಾರೆ.
















