Home ರಾಜ್ಯ ರಾಜೀನಾಮೆ ನಿರ್ಧಾರದಿಂದ ಹಿಂದೆ ಬೇಳೂರು; ಸಿಎಂ ಬೆಂಬಲವಾಗಿ ನಿಲ್ಲುವ ಘೋಷಣೆ..!!

ರಾಜೀನಾಮೆ ನಿರ್ಧಾರದಿಂದ ಹಿಂದೆ ಬೇಳೂರು; ಸಿಎಂ ಬೆಂಬಲವಾಗಿ ನಿಲ್ಲುವ ಘೋಷಣೆ..!!

32
0

✒️..ಅಮಿತ್ ಆರ್ ಆನಂದಪುರ

ಬೆಂಗಳೂರು: ಮಂತ್ರಿ ಸ್ಥಾನ ದೊರೆಯದಿದ್ದರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಬಲವಾಗಿ ಹಾಗೂ ಪಕ್ಷದ ಪರವಾಗಿ ಮುಂದುವರಿಯುತ್ತೇನೆ ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಸ್ಪಷ್ಟಪಡಿಸಿದರು.

ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂತ್ರಿ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ನನಗೆ ಬಹಳ ನೋವಾಗಿದೆ. ನನ್ನ ಬೆಂಬಲಿಗರು ಹಾಗೂ ಕಾರ್ಯಕರ್ತರು ಸಹ ನಿರಾಸೆಯಿಂದ ಅಳುತ್ತಾ ಊರಿಗೆ ಮರಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಂತ್ರಿ ಸ್ಥಾನ ದೊರೆಯದ ನೋವಿನಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಯೋಚಿಸಿದ್ದೆ. ಈ ವಿಷಯ ತಿಳಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾತ್ರಿ ದೂರವಾಣಿ ಮೂಲಕ ಸಂಪರ್ಕಿಸಿ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡ ಎಂದು ಸಲಹೆ ನೀಡಿದರು. ಬಳಿಕ ಬೆಳಿಗ್ಗೆ ಕರೆಸಿ ಮಾತುಕತೆ ನಡೆಸಿದರು ಎಂದು ತಿಳಿಸಿದರು.

ಮುಂದಿನ ಚುನಾವಣೆಯಲ್ಲಿ ಯಾವುದೇ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕೆ, ಮಂತ್ರಿ ಸ್ಥಾನ ಸಿಗದಿದ್ದರೂ ಪಕ್ಷ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಬಲವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ನನಗೆ ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ಟಿಕೆಟ್ ದೊರೆಯಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಪ್ರಮುಖ ಕಾರಣ. ಅದಕ್ಕಾಗಿ ಮಂತ್ರಿ ಸ್ಥಾನ ಸಿಗದಿದ್ದರೂ ಅವರ ಜೊತೆ ನಿಷ್ಠೆಯಿಂದ ನಿಲ್ಲುತ್ತೇನೆ ಎಂದು ಹೇಳಿದರು.

ನಾನು ಸಾಮಾನ್ಯ ಹಿಂದುಳಿದ ವರ್ಗದಿಂದ ಬಂದವನಾಗಿದ್ದು, ಹೈಕಮಾಂಡ್ ಮಟ್ಟದಲ್ಲಿ ಮಾತನಾಡುವ ಅವಕಾಶ ನನಗೆ ಇರಲಿಲ್ಲ. ಕಳೆದ ಮೂರು ವರ್ಷಗಳಲ್ಲಿ ಯಾವುದೇ ವಿವಾದ ಅಥವಾ ಭಿನ್ನಮತ ಸೃಷ್ಟಿಸದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಅದೇ ನಿಷ್ಠೆಯಿಂದ ಪಕ್ಷದೊಂದಿಗೆ ಇರುತ್ತೇನೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.