Home Shivamogga ಉಪ ತಹಶೀಲ್ದಾರ್ ಲಂಚದ ಬಲೆ ಬೀಸಿ; ಲೋಕಾಯುಕ್ತ ಬಲೆಗೆ..!

ಉಪ ತಹಶೀಲ್ದಾರ್ ಲಂಚದ ಬಲೆ ಬೀಸಿ; ಲೋಕಾಯುಕ್ತ ಬಲೆಗೆ..!

19
0

ಶಿವಮೊಗ್ಗ, : ಅಂಗವಿಕಲ ಪಿಂಚಣಿ ಸೌಲಭ್ಯ ಕಲ್ಪಿಸಲು ₹10,000 ಲಂಚಕ್ಕೆ ಬೇಡಿಕೆಯಿಟ್ಟು, ಮುಂಗಡವಾಗಿ ₹5,000 ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಭದ್ರಾವತಿ ತಾಲೂಕಿನ ಕಲ್ಲಿಹಾಳ್ ನಾಡಕಚೇರಿಯ ಉಪ ತಹಶೀಲ್ದಾರ್ ಪುಷ್ಪಲತಾ ಅವರಿಗೆ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು 4 ವರ್ಷಗಳ ಜೈಲು ಶಿಕ್ಷೆ ಹಾಗೂ ₹40,000 ದಂಡ ವಿಧಿಸಿದೆ.

ಭದ್ರಾವತಿ ತಾಲೂಕಿನ ಡಿ.ಬಿ. ಹಳ್ಳಿ ನಿವಾಸಿ ಗಿರೀಶ್ ಅವರು ತಮ್ಮ ಹುಟ್ಟು ಮೂಕ ತಂದೆಗೆ ಅಂಗವಿಕಲರ ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಕೋರಿ ಕಲ್ಲಿಹಾಳ್ ನಾಡಕಚೇರಿಗೆ ತೆರಳಿದ್ದರು. ಈ ವೇಳೆ ಉಪ ತಹಶೀಲ್ದಾರ್ ಪುಷ್ಪಲತಾ ಅವರು ಪಿಂಚಣಿ ಸೌಲಭ್ಯ ದೊರಕಿಸಲು ₹10,000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು.

ಈ ಕುರಿತು ಗಿರೀಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ 2017ರ ಸೆಪ್ಟೆಂಬರ್ 21ರಂದು ಭದ್ರಾವತಿ ತಾಲೂಕು ಕಚೇರಿಯಲ್ಲಿ ಗಿರೀಶ್ ಅವರಿಂದ ₹5,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಪುಷ್ಪಲತಾ ಅವರನ್ನು ಬಂಧಿಸಿದ್ದರು.

ಪ್ರಕರಣದ ತನಿಖೆಯನ್ನು ಪೊಲೀಸ್ ಇನ್‌ಸ್ಪೆಕ್ಟರ್ ಹೆಚ್.ಎಸ್. ತಿಪ್ಪೇಸ್ವಾಮಿ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು 2026ರ ಸೆಪ್ಟೆಂಬರ್ 1ರಂದು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ, ಪುಷ್ಪಲತಾ ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ಹಾಗೂ ₹40,000 ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಸುಂದರ್‌ ರಾಜ್ ಅವರು ವಾದ ಮಂಡಿಸಿದ್ದರು.

ಜಾಹೀರಾತು