Home Shivamogga ಗರ್ಭಕಂಠ ಕ್ಯಾನ್ಸರ್ ತಡೆಗೆ ಜಾಗೃತಿಯೇ ಮೊದಲ ಹೆಜ್ಜೆ: ಡಾ. ಚಿನ್ಮಯಿ..!!

ಗರ್ಭಕಂಠ ಕ್ಯಾನ್ಸರ್ ತಡೆಗೆ ಜಾಗೃತಿಯೇ ಮೊದಲ ಹೆಜ್ಜೆ: ಡಾ. ಚಿನ್ಮಯಿ..!!

45
0

ಶಿವಮೊಗ್ಗ: ಸಹ್ಯಾದ್ರಿ ಕಲಾ ಕಾಲೇಜಿನ ಸಮಾಜ ಕಾರ್ಯ ವಿಭಾಗ ಹಾಗೂ ಭಾರತೀಯ ಕುಟುಂಬ ಯೋಜನಾ ಸಂಘ (ಎಫ್‌ಪಿಎ ಇಂಡಿಯಾ), ಶಿವಮೊಗ್ಗ ಶಾಖೆ ಇವರ ಸಹಯೋಗದಲ್ಲಿ ಗರ್ಭಕಂಠ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿರಾಜ್ ಅಹಮದ್, ಆರೋಗ್ಯ ಸಮಸ್ಯೆಗಳು ಎದುರಾಗುವ ಮುನ್ನವೇ ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಅಗತ್ಯ. ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ವಿಶೇಷವಾಗಿ ವಿದ್ಯಾರ್ಥಿನಿಯರು ತಮ್ಮ ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದರು.

ಭಾರತೀಯ ಕುಟುಂಬ ಯೋಜನಾ ಸಂಘದ ಕುರಿತು ಮಾಹಿತಿ ನೀಡಿದ ಪ್ರೊ. ಚಂದ್ರಶೇಖರ್, ಸಂಸ್ಥೆಯು 1949ರಿಂದ ಕುಟುಂಬ ಯೋಜನೆ, ಮಹಿಳಾ ಆರೋಗ್ಯ ಹಾಗೂ ಕ್ಯಾನ್ಸರ್ ತಪಾಸಣೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. ಶಿವಮೊಗ್ಗ ಶಾಖೆಯಲ್ಲಿ ಕಡಿಮೆ ವೆಚ್ಚದಲ್ಲಿ ಸಮಾಲೋಚನೆ ಮತ್ತು ತಪಾಸಣೆ ಸೌಲಭ್ಯಗಳು ಲಭ್ಯವಿವೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಹಾಗೂ ಎಫ್‌ಪಿಎ ಇಂಡಿಯಾದ ಆರೋಗ್ಯಾಧಿಕಾರಿ ಡಾ. ಚಿನ್ಮಯಿ ಎಸ್.ಎಲ್. ಪ್ರಾತ್ಯಕ್ಷಿಕೆಯ ಮೂಲಕ ಗರ್ಭಕಂಠ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದರು. ಗರ್ಭಕಂಠ ಕ್ಯಾನ್ಸರ್‌ನ ಪ್ರಮುಖ ಕಾರಣಗಳಲ್ಲಿ ಹೆಚ್‌ಪಿವಿ ಸೋಂಕು ಪ್ರಮುಖವಾಗಿದ್ದು, ಸೂಕ್ತ ಮುನ್ನೆಚ್ಚರಿಕೆ, ಲಸಿಕೆ ಹಾಗೂ ನಿಯಮಿತ ತಪಾಸಣೆಯಿಂದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ತಿಳಿಸಿದರು. 21 ವರ್ಷ ಮೇಲ್ಪಟ್ಟ ಮಹಿಳೆಯರು ವೈದ್ಯಕೀಯ ಸಲಹೆಯಂತೆ ನಿಯಮಿತ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಹೆಚ್‌ಪಿವಿ ಲಸಿಕೆ ಕುರಿತು ಮಾಹಿತಿ ನೀಡಿದ ಅವರು, ವಯಸ್ಸಿನ ಆಧಾರದ ಮೇಲೆ ಲಸಿಕೆ ಪಡೆಯುವ ವೇಳಾಪಟ್ಟಿ ಬದಲಾಗಬಹುದು. ಆದ್ದರಿಂದ ಸೂಕ್ತ ವಯಸ್ಸಿನಲ್ಲಿ ವೈದ್ಯಕೀಯ ಸಲಹೆಯೊಂದಿಗೆ ಲಸಿಕೆ ಪಡೆಯುವುದು ಮುಖ್ಯ ಎಂದರು. ಲೈಂಗಿಕ ಆರೋಗ್ಯ ಮತ್ತು ಸುರಕ್ಷತೆಯ ಕುರಿತು ವೈಜ್ಞಾನಿಕ ಅರಿವು ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಹಾಲಮ್ಮ.ಎಂ., ಕ್ಯಾನ್ಸರ್ ಹಾಗೂ ಆರೋಗ್ಯದ ಕುರಿತು ಹೆಣ್ಣುಮಕ್ಕಳಷ್ಟೇ ಅಲ್ಲದೆ ಗಂಡುಮಕ್ಕಳಿಗೂ ಅರಿವು ಅಗತ್ಯ. ಸಮಾಜದ ಆರೋಗ್ಯ ಕಾಪಾಡುವ ಉದ್ದೇಶದಿಂದ ಲಿಂಗಭೇದವಿಲ್ಲದೆ ಆರೋಗ್ಯ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಉಪನ್ಯಾಸಕ ರವಿ ಎಂ.ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಮಂಜುನಾಥ್ ಕೆ.ಎನ್., ಸಂಯೋಜಕ ಪ್ರೊ. ಮಂಜುನಾಥ್ ಹೆಚ್.ಪಿ., ಉಪನ್ಯಾಸಕರಾದ ಶ್ರಿಂಚನ ಹೆಚ್.ಎಸ್., ಕುಮಾರಸ್ವಾಮಿ ಎಸ್.ಎಸ್., ಗೌರಿಶಂಕರ್ ಬಿ.ಆರ್., ರಮ್ಯ, ಎಫ್‌ಪಿಎಐ ನಿರ್ದೇಶಕರಾದ ಭಾರತಿ ಚಂದ್ರಶೇಖರ್, ಡಾ. ವರುಣ್ ಸೇರಿದಂತೆ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.