Home Blog ಗುರು ಸೇವೆ ಸಮಾಜದ ನಿರ್ಮಾಣದ ಶಕ್ತಿ; ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ..!!

ಗುರು ಸೇವೆ ಸಮಾಜದ ನಿರ್ಮಾಣದ ಶಕ್ತಿ; ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ..!!

0
4

✒️..ಅಮಿತ್ ಆರ್ ಆನಂದಪುರ

ಸಾಗರ(ಆನಂದಪುರ): ಶಿಕ್ಷಕರು ಸಮಾಜದ ಭವಿಷ್ಯ ರೂಪಿಸುವ ಪ್ರಮುಖ ಶಕ್ತಿಯಾಗಿದ್ದು, ಅವರ ಸೇವೆ ಹಾಗೂ ಸಮರ್ಪಣೆಯನ್ನು ಗೌರವಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಮೂಲಗದ್ದೆ ಮಠದ ಶ್ರೀ ಶ್ರೀ ಅಭಿನವ ಚನ್ನಬಸವ ಸ್ವಾಮೀ ಹೇಳಿದರು.

ಸಮೀಪದ ಇರುವಕ್ಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ವಿಶೇಷ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಅವರಿಗೆ ಆಯೋಜಿಸಿದ್ದ ‘ಗುರು ವಂದನೆ’ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಪಠ್ಯಜ್ಞಾನ ನೀಡುವುದಷ್ಟೇ ಅಲ್ಲದೆ, ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳು ಹಾಗೂ ಜವಾಬ್ದಾರಿಯುತ ಬದುಕಿನ ಅರಿವು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸುವುದು ಅವರ ಸೇವಾ ಮನೋಭಾವಕ್ಕೆ ಮತ್ತಷ್ಟು ಪ್ರೇರಣೆ ನೀಡುತ್ತದೆ ಎಂದು ಶ್ರೀಗಳು ತಿಳಿಸಿದರು.

ಶಿಕ್ಷಕರ ಕರ್ತವ್ಯನಿಷ್ಠೆ ಮತ್ತು ಸಮರ್ಪಣೆಯ ಫಲವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೊಂದಿಗೆ ಅವರ ವ್ಯಕ್ತಿತ್ವ ವಿಕಸನವೂ ಸಾಧ್ಯವಾಗುತ್ತದೆ. ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಅವರ ಸೇವೆಗೆ ಸದಾ ಗೌರವ ನೀಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗುರುಪ್ರಸಾದ್ ವಹಿಸಿದ್ದರು. ಜಿಲ್ಲಾ ವಿಶೇಷ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಗೂ ಇರುವಕ್ಕಿ ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಅವರು ಗುರು ವಂದನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಗುರು ವಂದನಾ ಸಮಿತಿಯ ಸಂಚಾಲಕ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಅರುಣ್ ಗೌಡ, ಗಣಪತಪ್ಪ, ಸಹಾಯಕ ಎಂಜಿನಿಯರ್ ಯೋಗೇಂದ್ರಪ್ಪ , ಸಿಆರ್‌ಪಿ ದೀಪಾ, ನೌಕರರ ಸಂಘದ ಸದಸ್ಯ ರಾಜಶೇಖರ್ ಶೆಟ್ಟಿ, ಶಾಲೆಯ ಶಿಕ್ಷಕ ಮಂಜುನಾಥ್ ಸೇರಿದಂತೆ ಎಸ್‌ಡಿಎಂಸಿ ಸದಸ್ಯರು ಹಾಗೂ ಗುರು ವಂದನಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

NO COMMENTS