Home Blog ಅಕ್ಕ ಕ್ಯಾಂಟೀನ್‌ಗೆ ವಿರೋಧಿಸಿದ ಪತ್ರಕರ್ತ, ಬಿಜೆಪಿ ಮುಖಂಡರ ವಿರುದ್ಧ ಸೋಮಶೇಖರ್ ಲಾವಿಗೆರೆ ಆಕ್ರೋಶ..!!

ಅಕ್ಕ ಕ್ಯಾಂಟೀನ್‌ಗೆ ವಿರೋಧಿಸಿದ ಪತ್ರಕರ್ತ, ಬಿಜೆಪಿ ಮುಖಂಡರ ವಿರುದ್ಧ ಸೋಮಶೇಖರ್ ಲಾವಿಗೆರೆ ಆಕ್ರೋಶ..!!

0
21

ಸಾಗರ(ಆನಂದಪುರ): ಸಾಮಾಜಿಕ ಕಳಕಳಿ ಇಲ್ಲದ ಪತ್ರಕರ್ತ ಬಿಡಿ ರವಿಕುಮಾರ್ ಹಾಗೂ ಬೂಟಾಟಿಕೆ ರಾಜಕಾರಣ ಮಾಡುವ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ ಹೊನಗೋಡುರೊಂದಿಗೆ ಸೇರಿಕೊಂಡು ಶಾಸಕರ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಸೋಮಶೇಖರ್ ಲಾವಿಗೆರೆ ಕಿಡಿಕಾರಿದರು.

ಆನಂದಪುರದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ 17 ಜಿಲ್ಲೆಗಳಿಗೆ ತಲಾ ಒಂದು ಅಕ್ಕ ಕ್ಯಾಂಟೀನ್ ನೀಡಲಾಗಿದ್ದು, ನಮ್ಮ ಜಿಲ್ಲೆಗೂ ಒಂದನ್ನು ತಂದು ಶಾಸಕರು ಆನಂದಪುರ ಭಾಗದಲ್ಲಿ ಸ್ಥಾಪಿಸಲು ಕ್ರಮ ಕೈಗೊಂಡಿದ್ದಾರೆ ಎಂದರು.

ಅಕ್ಕ ಕ್ಯಾಂಟೀನ್ ನಿರ್ಮಾಣಕ್ಕೆ ₹15 ಲಕ್ಷ ವೆಚ್ಚವಾಗುತ್ತಿದ್ದು, ಇದಕ್ಕಾಗಿ ಚಿಕ್ಕ ಕಟ್ಟಡ ನಿರ್ಮಿಸಬೇಕಾಗುತ್ತದೆ. ಆಸ್ಪತ್ರೆಯ ಆವರಣದಲ್ಲಿ ಈಗಾಗಲೇ ಹಲವು ಕಟ್ಟಡಗಳಿವೆ. ಹೀಗಾಗಿ, ಸುಮಾರು 25 ವರ್ಷಗಳಷ್ಟು ಹಳೆಯದಾಗಿ ಶಿಥಿಲಗೊಂಡಿದ್ದ ಕಟ್ಟಡವನ್ನು ಪುನರ್‌ನಿರ್ಮಿಸಿ, ಈ ಭಾಗದ ಬಡ ಕೂಲಿ ಕಾರ್ಮಿಕರು ಹಾಗೂ ಆಸ್ಪತ್ರೆಗೆ ಬರುವ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಆಹಾರ ದೊರೆಯುವ ಉದ್ದೇಶದಿಂದ ಅಕ್ಕ ಕ್ಯಾಂಟೀನ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಆನಂದಪುರದಲ್ಲಿ ಶಾಸಕರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರೆ ಅವುಗಳಿಗೆ ಅಡ್ಡಿಪಡಿಸುವವರೂ ಇದ್ದಾರೆ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅವರೊಂದಿಗೆ ಸೇರಿಕೊಂಡು ಪತ್ರಕರ್ತ ಹೋರಾಟ ನಡೆಸಿದ್ದು ಸರಿ ಇಲ್ಲ ಎಂದು ಆರೋಪಿಸಿದರು.

ಸಾಮಾಜಿಕ ಕಳಕಳಿ ಇರುವ ಪತ್ರಕರ್ತ ಜನರಿಗೆ ಅಗತ್ಯವಿರುವ ಸೌಲಭ್ಯಗಳಿಗಾಗಿ ಹೋರಾಟ ನಡೆಸಬೇಕು. ಆದರೆ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪೊಲೀಸ್ ಠಾಣೆಯ ಜಾಗ ಹಾಗೂ ಕಸ ವಿಲೇವಾರಿ ಘಟಕಕ್ಕೆ ಬೇಲಿ ಹಾಕಿದ ಸಂದರ್ಭದಲ್ಲಿ ಈ ಪತ್ರಕರ್ತ ಅದರ ವಿರುದ್ಧ ಹೋರಾಟ ನಡೆಸಲು ಮುಂದಾಗಿರಲಿಲ್ಲ ಎಂದು ಟೀಕಿಸಿದರು.

ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ 50 ಎಕರೆ ಜಾಗಕ್ಕೆ ಬೇಲಿ ಹಾಕಿದ್ದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಈಗ ನಮ್ಮ ಸರ್ಕಾರ ಮತ್ತು ಮುಖಂಡರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ತಮ್ಮನ್ನು ದೊಡ್ಡ ಪತ್ರಕರ್ತ ಎಂದುಕೊಂಡು ಇತರ ಪತ್ರಕರ್ತರಿಗೂ ಕೆಟ್ಟ ಹೆಸರು ತರಬಾರದು. ಕೆಲ ವರ್ಷಗಳ ಹಿಂದೆ ವೈದ್ಯರ ಮೇಲೆ ಕೈ ಮಾಡಿ, ಅವರನ್ನು ಇಲ್ಲಿಂದ ತೆರಳುವಂತೆ ಮಾಡಿದ ಸಂದರ್ಭದಲ್ಲಿ ಇವರಿಗೆ ಸಾಮಾಜಿಕ ಕಳಕಳಿಯ ಅರಿವು ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಅಕ್ಕ ಕ್ಯಾಂಟೀನ್ ನಿರ್ಮಾಣದ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರದವರು ಕೆಲಸ ಮಾಡುತ್ತಿದ್ದಾಗ, ಕೆಲಸಗಾರರ ಬಳಿ ಜೇಬಿನಲ್ಲಿ ಎಷ್ಟು ಹಣವಿದೆ ಎಂದು ಕೇಳಿ ಹಣ ಪಡೆದಿರುವ ವಿಚಾರ ನಮಗೆಲ್ಲರಿಗೂ ತಿಳಿದಿದೆ ಎಂದು ಆರೋಪಿಸಿದರು.

ಅಕ್ಕ ಕ್ಯಾಂಟೀನ್ ನಿರ್ಮಾಣವನ್ನು ಸಹಿಸಲಾಗದೆ, ಹೋಟೆಲ್ ಮಾಲೀಕರಿಂದ ಹಣ ಪಡೆದು ಈ ಪತ್ರಕರ್ತ ಹೋರಾಟ ನಡೆಸುತ್ತಿದ್ದಾರೆಯೇ ಎಂಬ ಅನುಮಾನ ನನಗೆ ಬರುತ್ತಿದೆ ಎಂದು ಹೇಳಿದರು.

ಸಾಮಾಜಿಕ ಕಳಕಳಿ ಇಲ್ಲದ ಪತ್ರಕರ್ತ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಪರಸ್ಪರ ಸೇರಿಕೊಂಡು ನಡೆಸುತ್ತಿರುವ ಈ ಹೋರಾಟವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಸೋಮಶೇಖರ್ ಲಾವಿಗೆರೆ ತಿಳಿಸಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಕುಮಾರಿ ಮಾತನಾಡಿ ಕ್ಯಾಂಟೀನ್ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಹಸಿದವರಿಗೆ ಊಟ ನೀಡುವ ಉತ್ತಮ ಯೋಜನೆಯಾಗಿದೆ. ಇಂತಹ ಜನಪರ ಯೋಜನೆಯ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂದರು.

ಬಿಜೆಪಿ ನಾಯಕರಿಗೆ ಕೆಲಸವಿಲ್ಲದೆ ನಮ್ಮ ನಾಯಕರು ಮತ್ತು ಅವರ ಸಹಚರರು ಏನು ಮಾಡುತ್ತಿದ್ದಾರೆ, ಅವರಲ್ಲಿ ಏನೇನು ಅಂಕುಡೊಂಕುಗಳಿವೆ ಎಂದು ದುರ್ಬೀನು ಹಿಡಿದು ಹುಡುಕುತ್ತಾ ಇರುತ್ತಾರೆ ಎಂದು ಟೀಕಿಸಿದರು.

ಅಕ್ಕ ಕ್ಯಾಂಟೀನ್ ನಿರ್ಮಾಣಕ್ಕೆ ₹15 ಲಕ್ಷ ನೀಡಲಾಗುತ್ತದೆ. ಈ ಹಣದಲ್ಲಿಯೇ ಶೆಡ್ ನಿರ್ಮಿಸುವುದರ ಜೊತೆಗೆ ಕ್ಯಾಂಟೀನ್‌ಗೆ ಅಗತ್ಯವಿರುವ ವ್ಯವಸ್ಥೆಗಳನ್ನೂ ಮಾಡಬೇಕಾಗುತ್ತದೆ. ಕೇವಲ ಶೆಡ್ ನಿರ್ಮಾಣಕ್ಕೆ ಮಾತ್ರ ಹಣ ನೀಡುವುದಿಲ್ಲ. ಹೀಗಾಗಿ, ಸರ್ಕಾರದ ಉದ್ದೇಶಕ್ಕೆ ಅನುಗುಣವಾಗಿ ಈಗಾಗಲೇ ಇರುವ ಕಟ್ಟಡವನ್ನು ಪುನರ್‌ನಿರ್ಮಿಸಿ ಸುಂದರವಾದ ಅಕ್ಕ ಕ್ಯಾಂಟೀನ್ ನಿರ್ಮಿಸಲು ಮುಂದಾಗಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಸಾಮಾಜಿಕ ಕಳಕಳಿ ಇಲ್ಲದ ಪತ್ರಕರ್ತರು ನಿರ್ಮಿತಿ ಕೇಂದ್ರದ ಈ ಯೋಜನೆಯ ಬಗ್ಗೆ ಸರಿಯಾಗಿ ಯೋಚಿಸದೆ, ಬಿಜೆಪಿಯವರೊಂದಿಗೆ ಸೇರಿಕೊಂಡು ದೂಷಿಸುತ್ತಿರುವುದು ಸರಿಯಲ್ಲ ಎಂದು ಅನಿತಾ ಕುಮಾರಿ ಆರೋಪಿಸಿದರು.

ಪತ್ರಕರ್ತ ಆದವರಿಗೆ ಅವರದೇ ಆದ ಚೌಕಟ್ಟು ಇರುತ್ತದೆ ದುರುದ್ದೇಶದಿಂದ ಆಮಿಷದಿಂದ ಅದನ್ನು ಮೀರಿ ಅಕ್ಕ ಕ್ಯಾಂಟೀನ್ ವಿರುದ್ಧ ಬಿಜೆಪಿ ಮುಖಂಡರ ಜೊತೆ ಸೇರಿ ಹೋರಾಟ ಮಾಡಿದ್ದು ಸರಿಯಿಲ್ಲ ಎಂದು ಮುಖಂಡರಾದ ಚೇತನ್ ರಾಜ್ ಕಣ್ಣೂರ್,ಹಾಗೂ ಲಿಂಗರಾಜ್ ಗೇರ್ಬೀಸ್ ಬಲವಾಗಿ ಖಂಡಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲೂಕು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

NO COMMENTS