✒️..ಅಮಿತ್ ಆರ್ ಆನಂದಪುರ
ಆನಂದಪುರ: ನನ್ನ ಅಧಿಕಾರದ ಅವಧಿಯಲ್ಲಿ ಈ ಭಾಗದಲ್ಲಿ ಸಾಧ್ಯವಾದಷ್ಟು ಸಂಪರ್ಕ ಸೇತುವೆಗಳು ಹಾಗೂ ರಸ್ತೆಗಳನ್ನು ನಿರ್ಮಿಸಿ ಜನರಿಗೆ ಅನುಕೂಲವಾಗುವಂತೆ ಮಾಡಿದ್ದೇನೆ ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ಹೇಳಿದರು.
ಆನಂದಪುರ ಸಮೀಪದ ಯಡೇಹಳ್ಳಿಯಲ್ಲಿ ದೇವು ಅವರ ಮನೆಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಸಾಧನೆಗಳು ಹಾಗೂ ನಾಯಕರು ನೀಡಿರುವ ಅಭಿವೃದ್ಧಿ ಕೊಡುಗೆಗಳನ್ನು ಗ್ರಾಮ ವಾಸ್ತವ್ಯ ಮತ್ತು ಜನಸಂಪರ್ಕ ಸಭೆಗಳ ಮೂಲಕ ಸಾರ್ವಜನಿಕರಿಗೆ ತಲುಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಸಚಿವರೂ ಸಹ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಕಾರ್ಯಕರ್ತರು ಕೂಡ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೊರೊನಾ ಸಂಕಷ್ಟದ ನಡುವೆಯೂ ನನ್ನ ಅಧಿಕಾರದ ಅವಧಿಯಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು, ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳ ಪರವಾಗಿ ಧ್ವನಿ ಎತ್ತಿ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

ಆನಂದಪುರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಕುರಿತು ಸಂಸದರೊಂದಿಗೆ ಚರ್ಚೆ ನಡೆಸಲಾಗಿದ್ದು, ಈ ಬೇಡಿಕೆ ಶೀಘ್ರದಲ್ಲೇ ಈಡೇರುವ ವಿಶ್ವಾಸವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನುಗೋಡು, ಗೋಪಾಲಕೃಷ್ಣ ಬೇಳೂರು ಅವರು ಮೊದಲ ಬಾರಿ ಅಧಿಕಾರಕ್ಕೆ ಬರಲು ಹರತಾಳು ಹಾಲಪ್ಪ ಅವರೇ ಕಾರಣ, ನಾನು ಅವರ ವರ್ತನೆ ಮೊದಲಿಂದ ನೋಡಿ ಬಂದಿದ್ದರಿಂದ ಕಾಂಗ್ರೆಸ್‌ನಲ್ಲಿ ಅವರಿಗೆ ಟಿಕೆಟ್ ದೊರೆತ ಬಳಿಕ ಕಾಂಗ್ರೆಸ್ ತೊರೆದೆ ಎಂದು ತಿಳಿಸಿದರು.
ಅನುಭವ ಹಾಗೂ ವಯಸ್ಸಿನ ದೃಷ್ಟಿಯಿಂದಲೂ ಇಂದಿನ ಶಾಸಕರಿಗೆ ಇನ್ನೂ ರಾಜಕೀಯ ಪ್ರಬುದ್ಧತೆ ಬಂದಿಲ್ಲ ಎಂದು ಟೀಕಿಸಿದ ಅವರು, ಹರತಾಳು ಹಾಲಪ್ಪ ತಂದ ಅನುದಾನದ ಕಾಮಗಾರಿಗಳಿಗೆ ತಮ್ಮ ಹೆಸರಿನ ಫಲಕ ಅಳವಡಿಸಿ, ಮತ್ತೆ ಗುದ್ದಲಿ ಪೂಜೆ ಮಾಡುವುದೇ ಇಂದಿನ ಶಾಸಕರ ಅಭಿವೃದ್ಧಿಯಾಗಿದೆ ಎಂದು ಆರೋಪಿಸಿದರು.
ಹಿರೇಹರಕದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ₹1 ಕೋಟಿ ಅನುದಾನ ನೀಡುವುದಾಗಿ ಗುದ್ದಲಿ ಪೂಜೆ ನಡೆಸಿದರೂ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದ ಅವರು, ಗುದ್ದಲಿ ಪೂಜೆ ಮಾಡಿ ಹೋಗುವುದೇ ಅವರ ಅಭಿವೃದ್ಧಿಯ ಮಾದರಿಯಾಗಿದೆ ಎಂದು ವ್ಯಂಗ್ಯವಾಡಿದರು.
ಕಾಗೋಡು ತಿಮ್ಮಪ್ಪ ಅವರು ಅಭಿವೃದ್ಧಿ ಚಿಂತನೆಯೊಂದಿಗೆ ಕೆಲಸ ಮಾಡುತ್ತಿದ್ದಂತೆ, ಹರತಾಳು ಹಾಲಪ್ಪ ಕೂಡ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ನಾಯಕರು ಎಂದು ರತ್ನಾಕರ ಹೊನುಗೋಡು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಮಧುರ, ಸುವರ್ಣ, ಸುಮ , ಬಿಸಿ ಲಕ್ಷ್ಮಣ್ ಶಾಂತಪ್ಪ ಗೌಡ್ರು, ಭರ್ಮಪ್ಪ, ದೇವರಾಜ್, ಪ್ರಶಾಂತ್, ಶ್ರೀಧರ್ ,ಹರೀಶ್ , ಜ್ಯೋತಿರಘು ಇನ್ನಿತರರು ಉಪಸ್ಥಿತರಿದ್ದರು.
















