✒️..ಅಮಿತ್ ಆರ್ ಆನಂದಪುರ
ಶಿಕಾರಿಪುರ ,ಏ.13 : ಬೈಕ್ ಸವಾರನ ಜೀವ ಉಳಿಸಲು ಹೋಗಿ ಖಾಸಗಿ ಬಸ್ ಒಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ಇಂದು ಶಿಕಾರಿಪುರದಲ್ಲಿ ನಡೆದಿದೆ.
ಇಂದು ಬೆಳಿಗ್ಗೆ 9 ಗಂಟೆಗೆ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ, 12 ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಶಿಕಾರಿಪುರ ನಗರದ ಖಾಸಗಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಈ ಘಟನೆ ಸಂಭವಿಸಿದ್ದು, ಬಸ್ ಗೆ ಅಡ್ಡ ಬಂದ ಬೈಕ್ ಸವಾರನ ಜೀವ ಉಳಿಸಲು ಹೋಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗುತ್ತಿದೆ.

ಬಸ್‌ನಲ್ಲಿ ಸುಮಾರು 25 ಕ್ಕೂ ಹೆಚ್ಚು ಪ್ರಯಾಣಿಕರು ಇದ್ದು, ಈಗಾಗಲೇ ಗಾಯಾಗೊಂಡಿರುವ 12 ಮಂದಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 9 ತಿಂಗಳ ಗರ್ಭೀಣಿಯೂ ಸಹ ಇದ್ದರು ಎನ್ನಲಾಗುತ್ತಿದೆ .

ಆಸ್ಪತ್ರೆಗೆ ಭೇಟಿ ನೀಡಿದ ಸಂಸದ:
ಮೆಗ್ಗಾನ್ ಆಸ್ಪತ್ರೆಗೆ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿ, ಗಾಯಾಳುಗಳಿಗೆ ಸಾಂತ್ವಾನ ಹೇಳಿ, ಕೂಡಲೇ ವೈದ್ಯರನ್ನು ಸಂಪರ್ಕಿಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಸೂಚಿಸಿದ್ದಾರೆ.
ತೀವ್ರ ಗಾಯಾಳುಗಳು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳಲ್ಲಿ ಹೆಚ್ಚಾಗಿ ಕೂಲಿಕಾರ್ಮಿಕರಾಗಿದ್ದು ಅವರು ಚೇತರಿಸಿಕೊಳ್ಳಲು 2-3 ತಿಂಗಳು ಬೇಕಾಗುತ್ತದೆ. ಸರ್ಕಾರದಿಂದ ಸಿಗುವ ಪರಿಹಾರವನ್ನು ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.









