✒️..ಅಮಿತ್ ಆರ್ ಆನಂದಪುರ
ಆನಂದಪುರ (ಸಾಗರ ತಾಲ್ಲೂಕು): ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ತೋಳಿಕಲ್ಲು ಶೇಖರಪ್ಪ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾರೆ.
ಇಲ್ಲಿನ ಇರುವಕ್ಕಿಯ ಗ್ರಾಮದ ತೋಳಿಕಲ್ಲು ನಿವಾಸಿ ಶೇಖರಪ್ಪ (68) ಮೃತಪಟ್ಟವರು.
ಏಪ್ರಿಲ್ 18ರಂದು ಮಧ್ಯಾಹ್ನ 3.45ರ ಸುಮಾರಿಗೆ ಆನಂದಪುರ ಸರ್ಕಾರಿ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿ ಶೇಖರಪ್ಪ ಅವರು ನಡೆದುಕೊಂಡು ಹೋಗುತ್ತಿದ್ದಾಗ, ಹಿಂದಿನಿಂದ ಬಂದ ಅಪರಿಚಿತ ಬೈಕ್ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ.
ಅಪಘಾತದ ರಭಸಕ್ಕೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದ ಅವರನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮುಂಜಾನೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣವು ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಈ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
















