ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಕಾರ್ಯದ ವೇಳೆ ಫಾರಂ ಹಂಚಿಕೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಹೊಸ ವೇಳಾಪಟ್ಟಿಯ ಪ್ರಕಾರ, ಮನೆಮನೆಗೆ ತೆರಳಿ ಬೂತ್ ಮಟ್ಟದ ಅಧಿಕಾರಿಗಳು (BLO) ಮತದಾರರಿಗೆ ಫಾರಂ ಹಂಚಿಕೆ ಹಾಗೂ ಸಂಗ್ರಹಿಸುವ ಅವಧಿಯನ್ನು ಜುಲೈ 29ರಿಂದ ಆಗಸ್ಟ್ 8ರವರೆಗೆ ವಿಸ್ತರಿಸಲಾಗಿದೆ. ವಿಶೇಷವಾಗಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ನಗರ ಪಾಲಿಕೆ ಪ್ರದೇಶಗಳಲ್ಲಿ ಫಾರಂ ಹಂಚಿಕೆ ಇನ್ನೂ ಪೂರ್ಣವಾಗದಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದರಿಂದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸುವ ದಿನಾಂಕವನ್ನು ಆಗಸ್ಟ್ 5ರಿಂದ ಆಗಸ್ಟ್ 17ಕ್ಕೆ ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ, ಆಗಸ್ಟ್ 17ರಿಂದ ಸೆಪ್ಟೆಂಬರ್ 16ರವರೆಗೆ ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು-ದಾವೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇದೇ ವೇಳೆ, ಆಗಸ್ಟ್ 17ರಿಂದ ಅಕ್ಟೋಬರ್ 15ರವರೆಗೆ ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆ ಹಾಗೂ ನೋಟಿಸ್ ವಿಲೇವಾರಿ ಪ್ರಕ್ರಿಯೆ ನಡೆಯಲಿದೆ. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಅಕ್ಟೋಬರ್ 19ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ರಾಜ್ಯದಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಸಮರ್ಪಕವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗ ಈ ಪರಿಷ್ಕೃತ ವೇಳಾಪಟ್ಟಿಯನ್ನು ಜಾರಿಗೆ ತಂದಿದೆ.
ಜಾಹೀರಾತು












