Home Blog ಕ್ಷಣಮಾತ್ರದಲ್ಲಿ ತಪ್ಪಿದ ಭಾರಿ ದುರಂತ:ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಬಸ್..!!

ಕ್ಷಣಮಾತ್ರದಲ್ಲಿ ತಪ್ಪಿದ ಭಾರಿ ದುರಂತ:ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಬಸ್..!!

49
0

✒️..ಅಮಿತ್ ಆರ್ ಆನಂದಪುರ

ಸಾಗರ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಸಾಗರ ತಾಲೂಕಿನ ಕಾಸ್ಪಾಡಿ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಸಾಗರದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಆನಂದಪುರಕ್ಕೆ ಹಿಂದಿರುಗುತ್ತಿದ್ದ ಕೆಪಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಸಾಮಾನ್ಯ ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಖಾಸಗಿ ಬಸ್ ಸಾಗರದಿಂದ ಶಿವಮೊಗ್ಗದತ್ತ ತೆರಳುತ್ತಿದ್ದ ವೇಳೆ ಕಾಸ್ಪಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕೆರೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.ಅದೃಷ್ಟವಶಾತ್ ಬಸ್ ಕೆರೆಗೆ ಬೀಳದೆ, ಬಸ್ಸಿನಲ್ಲಿದ್ದ 48 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಸ್ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 10 ವಿದ್ಯಾರ್ಥಿಗಳು ಹಾಗೂ ಓರ್ವ ಉಪನ್ಯಾಸಕಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರು ಆನಂದಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಬಸ್ ಕೆರೆಗೆ ಬೀಳುವ ಅಪಾಯ ಎದುರಾದ ಸಂದರ್ಭದಲ್ಲಿ ಚಾಲಕ ಸಮಯಪ್ರಜ್ಞೆ ಮೆರೆದಿದ್ದು, ಬಸ್ಸನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ ಕೆರೆಗೆ ಬಿದ್ದಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.