Home Shivamogga ಸಾಮಾಜಿಕ ಸೇವೆಗೆ ‘ಕರ್ನಾಟಕ ನಾಯಕತ್ವ ಪ್ರಶಸ್ತಿ’: ರವಿಕುಮಾರ್ ಬಿ.ಡಿ.ಗೆ ಗೌರವ..!!

ಸಾಮಾಜಿಕ ಸೇವೆಗೆ ‘ಕರ್ನಾಟಕ ನಾಯಕತ್ವ ಪ್ರಶಸ್ತಿ’: ರವಿಕುಮಾರ್ ಬಿ.ಡಿ.ಗೆ ಗೌರವ..!!

29
0

ಬೆಂಗಳೂರು: ಸಾಮಾಜಿಕ ಸೇವೆ, ಪತ್ರಿಕೋದ್ಯಮ, ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಆನಂದಪುರದ ಪತ್ರಕರ್ತ ಹಾಗೂ ಭೀಷ್ಮ ಪಥ ಯೂಟ್ಯೂಬ್ ಚಾನೆಲ್‌ನ ಸಂಸ್ಥಾಪಕ ರವಿಕುಮಾರ್ ಬಿ.ಡಿ. ಅವರಿಗೆ “ಕರ್ನಾಟಕ ನಾಯಕತ್ವ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ವುಮೆನ್ಸ್ ಪ್ರೊಟೆಕ್ಷನ್ ಅಂಡ್ ಎಂಪವರ್‌ಮೆಂಟ್ ವರ್ಲ್ಡ್‌ವೈಡ್ ಫೌಂಡೇಶನ್ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಾಮಾಜಿಕ ಸೇವೆ ಕ್ಷೇತ್ರದಲ್ಲಿ ರವಿಕುಮಾರ್ ಅವರು ತೋರಿರುವ ಬದ್ಧತೆ, ಜನಪರ ಕಾಳಜಿ ಹಾಗೂ ಸಮುದಾಯದ ಕಲ್ಯಾಣಕ್ಕಾಗಿ ನಡೆಸುತ್ತಿರುವ ವಿವಿಧ ಚಟುವಟಿಕೆಗಳನ್ನು ಗುರುತಿಸಿ ಗೌರವಿಸಲಾಗಿದೆ.

ಗ್ರಾಮೀಣ ಜನರ ಸಮಸ್ಯೆಗಳು, ಮೀನುಗಾರರ ಹಕ್ಕುಗಳು, ರೈತರ ವಿಚಾರಗಳು, ಶಿಕ್ಷಣ, ಆರೋಗ್ಯ, ಪರಿಸರ, ಸ್ಥಳೀಯ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆ ಸೇರಿದಂತೆ ವಿವಿಧ ಜನಪರ ವಿಷಯಗಳಿಗೆ ಮಾಧ್ಯಮದ ಮೂಲಕ ಧ್ವನಿಯಾಗಿರುವ ರವಿಕುಮಾರ್, ಪತ್ರಿಕೋದ್ಯಮವನ್ನು ಕೇವಲ ವೃತ್ತಿಯಾಗಿ ಪರಿಗಣಿಸದೆ ಸಾಮಾಜಿಕ ಜವಾಬ್ದಾರಿಯ ಕ್ಷೇತ್ರವಾಗಿ ಮುನ್ನಡೆಸುತ್ತಿದ್ದಾರೆ.

ಭೀಷ್ಮ ಪಥ ಯೂಟ್ಯೂಬ್ ಚಾನೆಲ್‌ನ ಸಂಸ್ಥಾಪಕರಾಗಿ ಸ್ಥಳೀಯ ಸುದ್ದಿಗಳು, ಜನಪರ ವಿಚಾರಗಳು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಬೆಳವಣಿಗೆಗಳಿಗೆ ಮಾಧ್ಯಮದ ಮೂಲಕ ವೇದಿಕೆ ಕಲ್ಪಿಸುತ್ತಿದ್ದಾರೆ. ಇದರೊಂದಿಗೆ ಕನ್ನಡ ಸಾಹಿತ್ಯ, ಜಾನಪದ, ಇತಿಹಾಸ ಮತ್ತು ಪರಂಪರೆ ಸಂರಕ್ಷಣೆ, ವೈಜ್ಞಾನಿಕ ಚಿಂತನೆ, ಮೀನುಗಾರಿಕೆ ಹಾಗೂ ಸಹಕಾರ ಕ್ಷೇತ್ರಗಳಲ್ಲಿಯೂ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಜವಾಬ್ದಾರಿ

ರವಿಕುಮಾರ್ ಬಿ.ಡಿ. ಅವರು ಪತ್ರಕರ್ತರು ಹಾಗೂ ಭೀಷ್ಮ ಪಥ ಯೂಟ್ಯೂಬ್ ಚಾನೆಲ್‌ನ ಸಂಸ್ಥಾಪಕರಾಗಿದ್ದು, ರಾಷ್ಟ್ರೀಯ ಮೀನುಗಾರರ ಸಂಘ (ರಿ.), ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ ಹೋಬಳಿ ಘಟಕದ ಗೌರವ ಅಧ್ಯಕ್ಷರು, ಇತಿಹಾಸ ಪರಂಪರೆ ಉಳಿಸಿ ಅಧ್ಯಯನ ಟ್ರಸ್ಟ್‌ನ ಗೌರವ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಇದರೊಂದಿಗೆ ಭಾರತ್ ಸೇವಾದಳದ ಸಾಗರ ತಾಲೂಕು ಕೋಶಾಧ್ಯಕ್ಷರು, ಶ್ರೀ ಗಂಗಾಮತ ಸಹಕಾರ ಸಂಘ ನಿಯಮಿತದ ನಿಯೋಜಿತ ಮುಖ್ಯ ಪ್ರವರ್ತಕರು ಹಾಗೂ SIFC ರಾಜ್ಯ ನಿರ್ದೇಶಕರಾಗಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಪತ್ರಿಕೋದ್ಯಮದ ಜೊತೆಗೆ ಕಲಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿರುವ ಅವರು ಒಂದು ಚಲನಚಿತ್ರದಲ್ಲಿ ಕಲಾವಿದರಾಗಿ ಅಭಿನಯಿಸಿದ್ದು, ಹಲವು ನಾಟಕಗಳಲ್ಲಿ ನಟ ಹಾಗೂ ನಾಟಕಕಾರರಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನ

ಗಾಂಧಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸೀನಿಯರ್ ಅಡ್ವಕೇಟ್ ರವೀಂದ್ರ ಎಂ.ವಿ., ಉಪನ್ಯಾಸಕಿ ಮಮತ ವಿ., ಕಾರ್ಯಕ್ರಮದ ಆಯೋಜಕರಾದ ಮಹೇಂದ್ರ ಸಿಂಗ್, ಜೀಷಾನ್ ಖಾನ್ ಹಾಗೂ ಉಪನ್ಯಾಸಕ ಗಿರೀಶ್ ಡಿ. ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಸಾಮಾಜಿಕ ಬದ್ಧತೆ, ಜನಪರ ಚಿಂತನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸೇವೆಯನ್ನು ಗುರುತಿಸಿ ನೀಡಲಾದ ಈ ಗೌರವವು ರವಿಕುಮಾರ್ ಬಿ.ಡಿ. ಅವರ ಸಾಮಾಜಿಕ ಮತ್ತು ಸಾರ್ವಜನಿಕ ಸೇವಾ ಚಟುವಟಿಕೆಗಳಿಗೆ ಮತ್ತೊಂದು ಮನ್ನಣೆ ದೊರೆತಂತಾಗಿದೆ.

ನಿಮ್ಮ ಒಂದು ಸಹಾಯ ಒಂದು ಜೀವ ಉಳಿಸಬಹುದು