Home Blog ಕಮಲ ಕೋಟೆಯಲ್ಲಿ ಹಸ್ತಪಡೆ ಶಕ್ತಿ ಪ್ರದರ್ಶನ: ಶಿಕಾರಿಪುರದಲ್ಲಿ ‘ಭಾರತ್ ಜೋಡೋ ..!!

ಕಮಲ ಕೋಟೆಯಲ್ಲಿ ಹಸ್ತಪಡೆ ಶಕ್ತಿ ಪ್ರದರ್ಶನ: ಶಿಕಾರಿಪುರದಲ್ಲಿ ‘ಭಾರತ್ ಜೋಡೋ ..!!

35
0

ಶಿವಮೊಗ್ಗ(ಶಿಕಾರಿಪುರ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ 2022ರ ಸೆಪ್ಟೆಂಬರ್ 30ರಂದು ಕರ್ನಾಟಕ ಪ್ರವೇಶಿಸಿದ ದಿನದ ಸ್ಮರಣಾರ್ಥ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ‘ಭಾರತ್ ಜೋಡೋ 2.0’ ಜನತಾ ಜಾಗೃತಿ ಪಾದಯಾತ್ರೆಗೆ ಶಿಕಾರಿಪುರದಲ್ಲಿ ಮಂಗಳವಾರ ಅದ್ದೂರಿ ಚಾಲನೆ ದೊರೆಯಿತು.

ಶಿಕಾರಿಪುರ ತಾಲ್ಲೂಕಿನ ಕಿಟ್ಟದಹಳ್ಳಿಯಿಂದ ಆರಂಭವಾದ ಪಾದಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸೇವಾದಳದ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು. ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಬಸವಂತಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಯಾತ್ರೆಗೆ ಸಾಥ್ ನೀಡಿದರು.

ಕಿಟ್ಟದಹಳ್ಳಿಯಿಂದ ಆರಂಭವಾದ ಪಾದಯಾತ್ರೆಯು ಮಟ್ಟಿಕೋಟೆ, ಹೊಸನಗರ ಕ್ರಾಸ್ ಹಾಗೂ ನೆಲವಾಗಿಲು ಕ್ರಾಸ್ ಮೂಲಕ ಸಾಗಿ ಶಿಕಾರಿಪುರ ಪಟ್ಟಣದ ಸಂತೆ ಮೈದಾನ ತಲುಪಿತು. ಬಳಿಕ ಅಲ್ಲಿ ಬಹಿರಂಗ ಸಭೆ ನಡೆಯಿತು. ಸುಮಾರು 9 ಕಿ.ಮೀ. ದೂರ ಪಾದಯಾತ್ರೆ ನಡೆಯಿತು.

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಮಾರ್ಗದುದ್ದಕ್ಕೂ ಕಾಂಗ್ರೆಸ್ ಧ್ವಜ ಹಾಗೂ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಭಾರತ್ ಜೋಡೋ ಕುರಿತು ರಚಿಸಲಾದ ಹಾಡುಗಳು ಮೊಳಗಿದವು.

ಬಿಜೆಪಿ ನಡೆಸಿದ್ದ ಬಳ್ಳಾರಿ ಪಾದಯಾತ್ರೆಗೆ ಪ್ರತಿಯಾಗಿ ಎಂಬ ರೀತಿಯಲ್ಲಿ ಕಾಂಗ್ರೆಸ್ ಶಿಕಾರಿಪುರದಿಂದಲೇ ‘ಭಾರತ್ ಜೋಡೋ 2.0’ ಯಾತ್ರೆ ಆರಂಭಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಯಿತು.

ಈಸೂರಿನಲ್ಲಿ ಹುತಾತ್ಮರಿಗೆ ನಮನ

ಪಾದಯಾತ್ರೆ ಆರಂಭಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಈಸೂರು ಗ್ರಾಮಕ್ಕೆ ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.

2022ರ ಸೆಪ್ಟೆಂಬರ್ 30ರಂದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಿದ ದಿನದ ಸ್ಮರಣಾರ್ಥವಾಗಿ ರಾಜ್ಯದಲ್ಲಿ ‘ಜನತಾ ಜೋಡೋ ಜಾಗೃತಿ ಯಾತ್ರೆ’ ಆರಂಭಿಸಲಾಗುತ್ತಿದೆ ಎಂದು ಹರಿಪ್ರಸಾದ್ ತಿಳಿಸಿದರು.

ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಈಸೂರು ಗ್ರಾಮಕ್ಕೆ ಮಹತ್ವದ ಸ್ಥಾನವಿದೆ. 1942ರ ‘ಭಾರತ ಬಿಟ್ಟು ತೊಲಗಿ’ ಚಳವಳಿಯ ಸಂದರ್ಭದಲ್ಲಿ ಈಸೂರು ಗ್ರಾಮಸ್ಥರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಐವರು ಸ್ವಾತಂತ್ರ್ಯ ಹೋರಾಟಗಾರರಿಗೆ 1943ರಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಸುಮಾರು 68 ಮಂದಿ ಜೈಲು ಶಿಕ್ಷೆ ಅನುಭವಿಸಿದ್ದರು ಎಂದು ಅವರು ಸ್ಮರಿಸಿದರು.

‘ಇಂತಹ ಪವಿತ್ರ ಸ್ಥಳದಿಂದ ಜನಜಾಗೃತಿ ಯಾತ್ರೆ ಆರಂಭಿಸಲು ತೀರ್ಮಾನಿಸಿದ್ದೇವೆ. ಹುತಾತ್ಮರಿಗೆ ನಮನ ಸಲ್ಲಿಸಿ ಶಿಕಾರಿಪುರದತ್ತ ಸುಮಾರು 10 ಕಿ.ಮೀ. ಪಾದಯಾತ್ರೆ ನಡೆಸಲಾಗುತ್ತಿದೆ’ ಎಂದು ಹರಿಪ್ರಸಾದ್ ಹೇಳಿದರು.

69 ಕ್ಷೇತ್ರಗಳಲ್ಲಿ ಯಾತ್ರೆ

ಕಾಂಗ್ರೆಸ್ ಸೋತಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹರಿಪ್ರಸಾದ್ ತಿಳಿಸಿದರು.

ರಾಜ್ಯದ 84 ಕಾಂಗ್ರೆಸ್ ಪರಾಜಿತ ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ನಗರ ವ್ಯಾಪ್ತಿಯ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಸುಮಾರು 69 ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದ ಅವರು, ಈ ವಿಚಾರದ ಕುರಿತು ಜನಜಾಗೃತಿ ಮೂಡಿಸುವುದು ಯಾತ್ರೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಪಾದಯಾತ್ರೆಯಲ್ಲಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಬಸವಂತಪ್ಪ,ಶಾಸಕ ಗೋಪಾಲಕೃಷ್ಣ ಬೇಳೂರು, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಬಲ್ಕೀಶ್ ಬಾನು, ನಿಗಮದ ಅಧ್ಯಕ್ಷರಾದ ಜಿ. ಪಲ್ಲವಿ, ಚೇತನ್ ಕೆ. ಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಸಿ. ಯೋಗೀಶ್, ಮುಖಂಡರಾದ ಎಂ. ಶ್ರೀಕಾಂತ್, ನಾಗರಾಜ್ ಗೌಡ, ಗೋಣಿ ಮಾಲತೇಶ್ ಇತರರು ಇದ್ದರು.