Home Shivamogga Sagara ಸಾಲಬಾಧೆ ತಾಳಲಾರದೆ ಚಾಲಕ ಸಾವು: ಚಂಪಕ ಸರಸ್ಸಿನಲ್ಲಿ ಮೃತದೇಹ ಪತ್ತೆ..!!

ಸಾಲಬಾಧೆ ತಾಳಲಾರದೆ ಚಾಲಕ ಸಾವು: ಚಂಪಕ ಸರಸ್ಸಿನಲ್ಲಿ ಮೃತದೇಹ ಪತ್ತೆ..!!

53
0

ಸಾಗರ(ಆನಂದಪುರ): ಸಾಲಬಾಧೆ ಹಾಗೂ ಕೆಲಸದ ಅನಿಶ್ಚಿತತೆಯಿಂದ ಮನನೊಂದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಆನಂದಪುರ ಸಮೀಪದ ಚಂಪಕ ಸರಸ್ಸು ಕೊಳದಲ್ಲಿ ನಡೆದಿದೆ.

ಮೃತರನ್ನು ಆನಂದಪುರದ ದಾಸಕೊಪ್ಪ ಗ್ರಾಮದ ಚಾಂದ್‌ಪಾಷಾ (46), ತಂದೆ ಯೂಸುಫ್ ಶರೀಫ್ ಎಂದು ಗುರುತಿಸಲಾಗಿದೆ. ಅವರು ಚಾಲಕ ವೃತ್ತಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ದೂರಿನ ಪ್ರಕಾರ ಜೀವನ ನಿರ್ವಹಣೆಗಾಗಿ ಚಾಂದ್‌ಪಾಷಾ ಅವರು ಕೈಗಡ ಸಾಲ ಮಾಡಿಕೊಂಡಿದ್ದರು. ಆದರೆ ಕೆಲಸ ಸರಿಯಾಗಿ ದೊರೆಯದ ಹಿನ್ನೆಲೆಯಲ್ಲಿ ಸಾಲ ತೀರಿಸಲು ಸಾಧ್ಯವಾಗದೆ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.

ಸೆಪ್ಟೆಂಬರ್ 30ರಂದು ಸಂಜೆ ಸುಮಾರು 6.30ರ ವೇಳೆಗೆ ಮನೆಯಿಂದ ಹೊರಟಿದ್ದ ಅವರು ರಾತ್ರಿ 10 ಗಂಟೆಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಹಾಗೂ ಸಂಬಂಧಿಕರು ವಿವಿಧೆಡೆ ಹುಡುಕಾಟ ನಡೆಸಿದ್ದರು.

ಅಕ್ಟೋಬರ್ 1ರಂದು ಬೆಳಿಗ್ಗೆ ಸುಮಾರು 7.30ರ ವೇಳೆಗೆ ಚಂಪಕ ಸರಸ್ಸು ಕೊಳದ ಬಳಿ ಹುಡುಕಾಟ ನಡೆಸಿದಾಗ ಚಾಂದ್‌ಪಾಷಾ ಅವರ ಮೃತದೇಹ ಪತ್ತೆಯಾಗಿದೆ. ಬಳಿಕ ಮೃತದೇಹವನ್ನು ಮೇಲಕ್ಕೆತ್ತಿ ಆನಂದಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಸಾಲ ತೀರಿಸಲಾಗದೆ ಹಾಗೂ ಕೆಲಸದ ಸಮಸ್ಯೆಯಿಂದ ಮನನೊಂದು ಈ ಘಟನೆ ಸಂಭವಿಸಿದೆ ಎಂದು ಕುಟುಂಬದವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.