Home Shivamogga KSRTC ಬಸ್ ನಾಳೆ ರಸ್ತೆಗೆ ಇಳಿಯುತ್ತದೆಯೋ, ಇಲ್ಲವೋ..??

KSRTC ಬಸ್ ನಾಳೆ ರಸ್ತೆಗೆ ಇಳಿಯುತ್ತದೆಯೋ, ಇಲ್ಲವೋ..??

11
0

ಬೆಂಗಳೂರು: ನಾಳೆ (ಮೇ.20) ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ಮುಷ್ಕರ ಬೇಡ, ಚರ್ಚೆ ನಡೆಸಿ ಎಂದು ಆದೇಶಿಸಿದೆ. ಈ ಹಿನ್ನಲೆಯಲ್ಲಿ ಆತಂಕದಲ್ಲಿದ್ದ ಲಕ್ಷಾಂತರ ಪ್ರಯಾಣಿಕರು ಹಾಗೂ ದಿನನಿತ್ಯದ ಕೂಲಿ ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ರಾಜ್ಯಾದ್ಯಂತ ಮೇ 20ರಂದು ನಡೆಯಬೇಕಿದ್ದ ಸಾರಿಗೆ ನೌಕರರ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಸಾರ್ವಜನಿಕರಿಗೆ ತೊಂದರೆ ಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ನ್ಯಾಯಾಲಯ ಈ ಮಹತ್ವದ ಆದೇಶ ಹೊರಡಿಸಿದ್ದು, ಸರ್ಕಾರ ಮತ್ತು ಸಾರಿಗೆ ಸಂಘಟನೆಗಳು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳ ಬೇಕು ಎಂದು ಸೂಚಿಸಿದೆ.

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿತ್ತು. ಮನೆ ಕೆಲಸ ಮಾಡುವ ಮಹಿಳೆ ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಶ್ರೀಧರ್ ಅವರು ಈ ಅರ್ಜಿ ಸಲ್ಲಿಸಿದ್ದು ವಿಶೇಷ ಗಮನ ಸೆಳೆಯಿತು. ಮುಷ್ಕರದಿಂದ ಸಾಮಾನ್ಯ ಜನರು, ವಿದ್ಯಾರ್ಥಿಗಳು ಹಾಗೂ ದಿನಗೂಲಿ ಕಾರ್ಮಿಕರಿಗೆ ಭಾರೀ ಸಮಸ್ಯೆಯಾಗಬಹುದು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ನ್ಯಾಯಮೂರ್ತಿ ಗೋವಿಂದ ರಾಜ ಅವರ ನೇತೃತ್ವದ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸಾರ್ವಜನಿಕ ಹಿತದೃಷ್ಟಿಯಿಂದ ಸಮಾಜದ ಸಾಮಾನ್ಯ ವರ್ಗದವರು ನ್ಯಾಯಾಲಯದ ಮೊರೆ ಹೋಗಿರುವುದನ್ನು ಹೈಕೋರ್ಟ್ ಶ್ಲಾಘಿಸಿದೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿರುವುದನ್ನು ನ್ಯಾಯಾಲಯ ಗಮನಿಸಿದೆ.

ಮುಷ್ಕರ ನಡೆಸದಂತೆ ಕೋರ್ಟ್ ಸೂಚನೆ:

ಸರ್ಕಾರ ಮತ್ತು ಸಾರಿಗೆ ನೌಕರರ ಸಂಘಟನೆಗಳ ವಾದ ಆಲಿಸಿದ ಬಳಿಕ ನ್ಯಾಯಾಲಯ ಮುಷ್ಕರ ನಡೆಸದಂತೆ ಸೂಚನೆ ನೀಡಿದೆ. ಈ ಮಧ್ಯೆ ಕಾರ್ಮಿಕ ಆಯುಕ್ತರ ಮುಂದೆ ರಾಜಿ ಸಂಧಾನ ಪ್ರಕ್ರಿಯೆ ಮುಂದುವರಿದಿರುವುದರಿಂದ, ಈಗ ಮುಷ್ಕರ ನಡೆಸುವುದು ಕಾನೂನುಬಾಹಿರ ಎಂದು ಅಭಿಪ್ರಾಯಪಟ್ಟಿದೆ.

ಸರ್ಕಾರಕ್ಕೆ ಮಹತ್ವದ ನಿರ್ದೇಶನ:

ಸಾರಿಗೆ ನೌಕರರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಮಾತುಕತೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಸಾರಿಗೆ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಈ ಕುರಿತು ಸರ್ಕಾರ ಮತ್ತು ಸಂಘಟನೆಗಳಿಗೆ ಅಧಿಕೃತ ನೋಟಿಸ್ ಜಾರಿಯಾಗಿದೆ.