ಹೊಸನಗರ: ಪತ್ರಿಕೋದ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯುವ ಪತ್ರಕರ್ತ ಚರಣ್ ಅವರಿಗೆ ಪ್ರತಿಷ್ಠಿತ ‘ನ್ಯಾಷನಲ್ ಗ್ಲೋಬಲ್ ಅವಾರ್ಡ್’ ಲಭಿಸಿದೆ.
ಶ್ರೀನಿಧಿ ಫೌಂಡೇಷನ್ (ರಿ), ಕರ್ನಾಟಕ ಹಾಗೂ ಪ್ರತಿಫಲ ಫೌಂಡೇಷನ್ (ರಿ), ಧಾರವಾಡ ಇವರ ಸಂಯೋಗದಲ್ಲಿ ಗೋವಾದ ರವೀಂದ್ರ ಭವನ, ವಾಸ್ಕೋದಲ್ಲಿ ಆಯೋಜಿಸಿದ್ದ ‘ಕನ್ನಡ ಸಾಂಸ್ಕೃತಿಕ ಸಮ್ಮೇಳನ ಗೋವಾ–2026’ರ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚರಣ್ ಅವರಿಗೆ ಈ ಗೌರವ ಪ್ರದಾನ ಮಾಡಲಾಯಿತು.
ಹೊಸನಗರ ತಾಲೂಕಿನ ಜೇನಿ ಗ್ರಾಮದ ಮಣ್ಣನಕೊಪ್ಪದ ಬಿ. ಲಿಂಗರಾಜು ಹಾಗೂ ಶೋಭಾ ದಂಪತಿ ಪುತ್ರರಾದ ಚರಣ್, ಕುವೆಂಪು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ, ಸಮೂಹ ಸಂವಹನ ಹಾಗೂ ಕನ್ನಡ ಸಾಹಿತ್ಯದಲ್ಲಿ ಬಿ.ಎ. ಪದವಿ ಪಡೆದಿದ್ದಾರೆ. 21ನೇ ವಯಸ್ಸಿನಲ್ಲೇ ಸ್ವತಂತ್ರವಾಗಿ ‘ಕನ್ನಡ ಗ್ಲೋಬಲ್ ನ್ಯೂಸ್’ ಮಾಧ್ಯಮ ಸಂಸ್ಥೆ ಸ್ಥಾಪಿಸಿ, ಯುವ ಪತ್ರಕರ್ತರಾಗಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಡಿಜಿಟಲ್ ಮಾಧ್ಯಮದ ಮೂಲಕ ಮಲೆನಾಡು ಹಾಗೂ ಶಿವಮೊಗ್ಗ ಜಿಲ್ಲೆಯ ಗ್ರಾಮೀಣ, ಶೈಕ್ಷಣಿಕ, ಆಡಳಿತಾತ್ಮಕ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗುತ್ತಿರುವ ಚರಣ್, ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.
ಸಂಸ್ಥೆಯ ವತಿಯಿಂದ ಪ್ರತಿ ಭಾನುವಾರ ವಿಶೇಷ ಸಾಹಿತ್ಯಿಕ ಸಂಚಿಕೆ ನಡೆಸಲಾಗುತ್ತಿದ್ದು, ಪ್ರಮುಖ ಸಾಹಿತಿಗಳು ಹಾಗೂ ಉದಯೋನ್ಮುಖ ವಿದ್ಯಾರ್ಥಿ ಬರಹಗಾರರಿಗೆ ತಮ್ಮ ಬರಹಗಳನ್ನು ಪ್ರಕಟಿಸಲು ವೇದಿಕೆ ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸುವುದು ಇದರ ಉದ್ದೇಶವಾಗಿದೆ.
ಕಿರಿಯ ವಯಸ್ಸಿನಲ್ಲಿಯೇ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಗುರುತಿಸಿ ಚರಣ್ ಅವರಿಗೆ ಈ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪಡೆದಿರುವ ಚರಣ್ ಅವರಿಗೆ ಹಿತೈಷಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.











