✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ: ಕಾರ್ಪೊರೇಟ್ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ವೇಗವಾಗಿ ಬೆಳೆಯುತ್ತಿದ್ದು, ಸಂಸ್ಥೆಗಳ ಕಾರ್ಯವಿಧಾನದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ ಎಂದು ಸಂಪನ್ಮೂಲ ವ್ಯಕ್ತಿಯಾದ ಬೆಂಗಳೂರಿನ ಫಿಡೆಲಿಟಸ್ ಕಾರ್ಪೊರೇಷನ್ ನಿರ್ದೇಶಕರಾದ ಅನಿರೀತ್ ಸಿ.ಆರ್ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಆಯೋಜಿಸಿದ್ದ “ಕಾರ್ಪೊರೇಟ್ ಸಂವಹನ: ಪ್ರವೃತ್ತಿಗಳು ಮತ್ತು ಸವಾಲುಗಳು” ವಿಷಯದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಸಂವಹನದ ವಿಕಸನವು ಸಾಂಪ್ರದಾಯಿಕ ಯುಗದಿಂದ ಡಿಜಿಟಲ್ ಯುಗದವರೆಗೆ ಸಾಗಿದ್ದು, ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಸಂವಹನವು ಪ್ರಬಲ ಆಯುಧವಾಗಿ ಪರಿಣಮಿಸಿದೆ ಎಂದರು.
ಡಿಜಿಟಲ್ ಕೌಶಲ್ಯಗಳು, ಕ್ರಿಟಿಕಲ್ ಥಿಂಕಿಂಗ್, ಡೇಟಾ ವಿಶ್ಲೇಷಣೆ ಹಾಗೂ ಪರಿಣಾಮಕಾರಿ ಸಂವಹನ ಕೌಶಲ್ಯಗಳು ಇಂದಿನ ಉದ್ಯೋಗ ಕ್ಷೇತ್ರದಲ್ಲಿ ಅತ್ಯಗತ್ಯವೆಂದು ತಿಳಿಸಿದರು.
ಕಾರ್ಪೊರೇಟ್ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸರಿಯಾಗಿ ಬಳಸಿಕೊಂಡರೆ ಉನ್ನತ ಹಂತಕ್ಕೆ ಹೋಗಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಭಾಗದ ಮುಖ್ಯಸ್ಥರಾದ ಡಾ. ವರ್ಗಿಸ್ ಪಿ.ಎ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ. ಸತೀಶ್ ಕುಮಾರ್, ಉಪನ್ಯಾಸಕರಾದ ಡಾ. ರುಮಾನ ತನ್ವೀರ್, ವರ್ಣಶ್ರೀ, ಸಂಗೀತಮ್, ಪರಸಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಿಂಚನ ನಿರೂಪಿಸಿದರು. ಪ್ರಾರ್ಥನೆಯನ್ನು ರಕ್ಷಿತಾ ಆರ್ ನಡೆಸಿದರು.









