Home Blog ಬರದ ಛಾಯೆಯಲ್ಲೂ ಸಾಗರ–ಹೊಸನಗರಕ್ಕೆ ಬರಪೀಡಿತ ಸ್ಥಾನಮಾನ ಇಲ್ಲ: ಶಾಸಕರ ಮೌನಕ್ಕೆ ರತ್ನಾಕರ ಹೊನಗೋಡು ಕಿಡಿ..!!

ಬರದ ಛಾಯೆಯಲ್ಲೂ ಸಾಗರ–ಹೊಸನಗರಕ್ಕೆ ಬರಪೀಡಿತ ಸ್ಥಾನಮಾನ ಇಲ್ಲ: ಶಾಸಕರ ಮೌನಕ್ಕೆ ರತ್ನಾಕರ ಹೊನಗೋಡು ಕಿಡಿ..!!

23
0

✒️..ಅಮಿತ್ ಆರ್ ಆನಂದಪುರ

ಸಾಗರ(ಆನಂದಪುರ): ರಾಜ್ಯದ ಹಲವು ತಾಲೂಕುಗಳನ್ನು ಸರ್ಕಾರ ಬರಪೀಡಿತ ತಾಲೂಕುಗಳೆಂದು ಘೋಷಿಸಿರುವ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಹೊಸನಗರ ತಾಲೂಕುಗಳು ಬರಪೀಡಿತ ಪಟ್ಟಿಯಿಂದ ಹೊರಗುಳಿದಿರುವುದು ರೈತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಹೇಳಿದರು.

ಅವರು ಆನಂದಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಕೊರತೆ, ಕೃಷಿ ಚಟುವಟಿಕೆಗಳ ಮೇಲೆ ಉಂಟಾಗುತ್ತಿರುವ ಪರಿಣಾಮ ಹಾಗೂ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಪರಿಗಣಿಸಿ ಸಾಗರ–ಹೊಸನಗರ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸುವಂತೆ ಸರ್ಕಾರದ ಗಮನ ಸೆಳೆಯುವ ಜವಾಬ್ದಾರಿ ಸ್ಥಳೀಯ ಜನಪ್ರತಿನಿಧಿಗಳ ಮೇಲಿದೆ ಎಂದರು.

ಈ ವಿಚಾರದಲ್ಲಿ ಸಾಗರ ಕ್ಷೇತ್ರದ ಶಾಸಕರಿಂದ ನಿರೀಕ್ಷಿತ ಮಟ್ಟದ ಒತ್ತಡ ಅಥವಾ ಧ್ವನಿ ಕೇಳಿಬಂದಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ರೈತರ ಸಮಸ್ಯೆಗಳ ಬಗ್ಗೆ ಶಾಸಕರು ಸರ್ಕಾರದ ಗಮನ ಸೆಳೆಯಬೇಕು. ವಿಧಾನಸಭೆಯಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ಸಾಗರ ಮತ್ತು ಹೊಸನಗರ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಬೇಕಿತ್ತು. ಆದರೆ ಈ ಕೆಲಸ ಆಗಿಲ್ಲ ಏಕೆ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಅವರು ಹೇಳಿದರು.

ಬರಪೀಡಿತ ತಾಲೂಕು ಎಂದು ಘೋಷಣೆಯಾದಲ್ಲಿ ರೈತರಿಗೆ ಸರ್ಕಾರದ ವಿವಿಧ ಪರಿಹಾರ ಹಾಗೂ ನೆರವು ಕ್ರಮಗಳು ದೊರೆಯುವ ಸಾಧ್ಯತೆ ಇದೆ. ಹೀಗಾಗಿ ತಮ್ಮ ಕ್ಷೇತ್ರದ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮಕ್ಕೆ ಒತ್ತಾಯಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂಬುದು ರೈತರ ಅಭಿಪ್ರಾಯವಾಗಿದೆ ಎಂದು ರತ್ನಾಕರ ಹೊನಗೋಡ್ ತಿಳಿಸಿದರು.

ಚರಂಡಿ ಮಧ್ಯೆ ಬಾವಿ ನಿರ್ಮಾಣ: ಸಾರ್ವಜನಿಕರ ಆರೋಗ್ಯದ ಬಗ್ಗೆ ಪ್ರಶ್ನೆ

ಇದೇ ವೇಳೆ ಸಾಗರದಲ್ಲಿ ಸಾರ್ವಜನಿಕರ ಬಳಕೆಗೆ ನಿರ್ಮಿಸಲಾಗಿರುವ ಕುಡಿಯುವ ನೀರಿನ ಮೂಲ ಬಾವಿಯ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದರು.

ಊರಿನ ಕೊಳಚೆ ನೀರು ಹರಿಯುವ ಚರಂಡಿಯ ಮಧ್ಯಭಾಗದಲ್ಲಿ ಬಾವಿ ನಿರ್ಮಿಸಿರುವುದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎದುರಾಗಿದೆ. ಚರಂಡಿಯ ಕೊಳಚೆ ನೀರು ಭೂಮಿಯೊಳಗೆ ಸೇರಿ ಬಾವಿಯ ನೀರಿಗೆ ಮಿಶ್ರಣವಾಗುವ ಸಾಧ್ಯತೆ ಇದ್ದರೆ, ಆ ನೀರನ್ನು ಕುಡಿಯುವ ಸಾರ್ವಜನಿಕರ ಆರೋಗ್ಯದ ಹೊಣೆ ಯಾರು ಎಂಬ ಪ್ರಶ್ನೆಯೂ ಸಹಜವಾಗಿ ಮೂಡುತ್ತದೆ ಎಂದರು.

ಚರಂಡಿಯ ಮಧ್ಯದಲ್ಲಿ ಬಾವಿ ನಿರ್ಮಿಸಿರುವುದು ವೈಜ್ಞಾನಿಕ ಹಾಗೂ ಆರೋಗ್ಯದ ದೃಷ್ಟಿಯಿಂದ ಸಮಂಜಸವೇ? ಸಂಬಂಧಪಟ್ಟ ಅಧಿಕಾರಿಗಳು ಬಾವಿಯ ನೀರಿನ ಗುಣಮಟ್ಟವನ್ನು ಪರೀಕ್ಷಿಸಿದ್ದಾರೆಯೇ? ನೀರು ಕುಡಿಯಲು ಯೋಗ್ಯವಾಗಿದೆ ಎಂಬ ವರದಿ ಇದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಶಾಸಕರೇ, ರೈತರ ಸಮಸ್ಯೆ, ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಗುಣಮಟ್ಟದಂತಹ ಮೂಲಭೂತ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮಕ್ಕೆ ಒತ್ತಾಯಿಸಬೇಕು ಎಂದು ರತ್ನಾಕರ ಹೊನಗೋಡು ಕಿಡಿಕಾರಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುರುರಾಜ್, ಮೋಹನ್ ಕುಮಾರ್, ತಾವರೆಹಳ್ಳಿ ಸದಸ್ಯ ಮೋಹನ್ ಕುಮಾರ್, ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಶಾಂತಕುಮಾರ್ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಜುನಾಥ್ ಉಪಸ್ಥಿತರಿದ್ದರು.