Home Blog ಸತ್ಯ, ಅಹಿಂಸೆ ಮತ್ತು ಆಧ್ಯಾತ್ಮದ ಮೂಲಕ ದೇಶವನ್ನು ಒಗ್ಗೂಡಿಸಿದ ಮಹಾತ್ಮ ಗಾಂಧೀ: ನಾಡೋಜ ಡಾ. ವೂಡೇ...

ಸತ್ಯ, ಅಹಿಂಸೆ ಮತ್ತು ಆಧ್ಯಾತ್ಮದ ಮೂಲಕ ದೇಶವನ್ನು ಒಗ್ಗೂಡಿಸಿದ ಮಹಾತ್ಮ ಗಾಂಧೀ: ನಾಡೋಜ ಡಾ. ವೂಡೇ ಪಿ. ಕೃಷ್ಣ..!!

14
0

ಸಾಗರ (ಆನಂದಪುರ): ಭಾರತದ ಬಹುದೊಡ್ಡ ಶಕ್ತಿ ಆಧ್ಯಾತ್ಮ. ಆಧ್ಯಾತ್ಮದ ನೆಲೆಗಟ್ಟಿನಲ್ಲಿ ದೇಶವನ್ನು ಸಂಘಟಿಸಬೇಕು ಎಂಬ ಆಶಯದೊಂದಿಗೆ ಮಹಾತ್ಮ ಗಾಂಧೀಜಿ ಎಲ್ಲರನ್ನೂ ಒಗ್ಗೂಡಿಸಿದ್ದರು ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಅಭಿಪ್ರಾಯಪಟ್ಟರು.

ಆನಂದಪುರದ ಜ್ಞಾನ ಸಹ್ಯಾದ್ರಿ ಪ್ರಥಮ ದರ್ಜೆ ಕಾಲೇಜು ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಮೂರು ದಿನಗಳ ಗಾಂಧಿ ತತ್ವಪ್ರಣೀತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿಯವರ ಭಾವಚಿತ್ರವನ್ನು ನೋಡಿದ ತಕ್ಷಣ ಮನಸ್ಸಿನಲ್ಲಿ ಮೂಡುವ ಭಾವನೆ ಎಲ್ಲರನ್ನೂ ಪ್ರೀತಿಸಬೇಕು, ಯಾರನ್ನೂ ದ್ವೇಷಿಸಬಾರದು ಎಂಬುದಾಗಿದೆ. ‘ದೇವರೇ, ಎಲ್ಲರಿಗೂ ಸನ್ಮತಿಯನ್ನು ನೀಡು’ ಎಂಬ ಪ್ರಾರ್ಥನೆಯು ಗಾಂಧೀಜಿಯವರ ಆಶಯವನ್ನು ಪ್ರತಿಬಿಂಬಿಸುತ್ತದೆ. ಭಾರತೀಯ ಪ್ರತಿಯೊಬ್ಬ ಪ್ರಜೆಯ ಹೃದಯದಲ್ಲಿ ಸ್ಥಾನ ಪಡೆದಿರುವ ಗಾಂಧೀಜಿಯವರಿಗೆ ದೇಶ ನೀಡಿದ ಅತ್ಯುನ್ನತ ಗೌರವವೇ ‘ಮಹಾತ್ಮ’ ಎಂಬ ಬಿರುದು ಎಂದು ಹೇಳಿದರು.

ವಿದ್ಯಾರ್ಥಿಗಳು ಗಾಂಧೀಜಿಯವರ ಸಾಹಿತ್ಯವನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಭಾರತವನ್ನು ಗಾಂಧೀಜಿಯವರಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಭಾರತ ಮತ್ತು ಗಾಂಧೀಜಿ ಪರಸ್ಪರ ಹಾಸುಹೊಕ್ಕಾಗಿದ್ದಾರೆ. ಎಲ್ಲ ಧರ್ಮಗಳ ಜನರು ಒಗ್ಗೂಡಿ ಒಂದೇ ರಾಷ್ಟ್ರವಾಗಿ ಮುನ್ನಡೆಯಬೇಕು ಹಾಗೂ ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ಜನಮಾನಸದಲ್ಲಿ ಬಿತ್ತಬೇಕು ಎಂಬ ಉದ್ದೇಶದಿಂದ ಗಾಂಧೀಜಿ ಹೋರಾಡಿದರು ಎಂದು ತಿಳಿಸಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲುವಾಸ ಮತ್ತು ಉಪವಾಸ ಸತ್ಯಾಗ್ರಹಗಳ ಮೂಲಕ ಗಾಂಧೀಜಿ ಅಪಾರ ತ್ಯಾಗ ಮಾಡಿದ್ದಾರೆ. ಅವರ ಸತ್ಯ, ಅಹಿಂಸೆ ಮತ್ತು ಮಾನವೀಯತೆಯ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಡಾ. ವೂಡೇ ಪಿ. ಕೃಷ್ಣ ಹೇಳಿದರು.

ಮನುಕುಲ ಇರುವವರೆಗೂ ಗಾಂಧಿ ವಿಚಾರಗಳು ಪ್ರಸ್ತುತ

ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಗಣೇಶ್ ಆರ್. ಅವರು, ಗಾಂಧೀಜಿಯವರ ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ ಮತ್ತು ಪ್ರೀತಿಯ ಮೌಲ್ಯಗಳು ಇಂದಿನ ಸಮಾಜದಲ್ಲಿ ಕ್ಷೀಣಿಸುತ್ತಿರುವುದು ವಿಷಾದನೀಯ ಎಂದರು.

ಗಾಂಧೀಜಿಯವರ ವ್ಯಕ್ತಿತ್ವ ಮತ್ತು ವಿಚಾರಗಳನ್ನು ಅರಿತವರಿಗೆ ಅವರ ತತ್ವಗಳು ಇಂದಿಗೆ ಮಾತ್ರವಲ್ಲ, ಮನುಕುಲ ಇರುವವರೆಗೂ ಪ್ರಸ್ತುತವಾಗಿರುತ್ತವೆ ಎಂಬುದು ಮನವರಿಕೆಯಾಗುತ್ತದೆ. ಇಂದಿನ ಯುವಜನತೆಯಲ್ಲಿ ಗಾಂಧೀಜಿಯವರ ಸಿದ್ಧಾಂತಗಳನ್ನು ಬಿತ್ತಿ ಬೆಳೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಗಾಂಧಿ ಜಾನಪದ ಕಣ್ಣಲ್ಲಿ ಗೀತ ನಮನ

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡಪ್ಪ ಜೋಗಿ ಅವರಿಂದ ‘ಗಾಂಧಿ ಜಾನಪದ ಕಣ್ಣಲ್ಲಿ’ ಎಂಬ ಗೀತ ನಮನ ಕಾರ್ಯಕ್ರಮ ನಡೆಯಿತು.

ಜ್ಞಾನ ಸಹ್ಯಾದ್ರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ಸುರೇಶ್ ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಯುವ ಅಧಿಕಾರಿ ಹಾಗೂ ಸಹಾಯಕ ನಿರ್ದೇಶಕಿ ಕುಮಾರಿ ಐಶ್ವರ್ಯ ಶ್ರೀನಿವಾಸ್, ಕ್ಷೇತ್ರ ಪ್ರಚಾರ ಸಹಾಯಕ ಲಕ್ಷ್ಮಿಕಾಂತ ಸಿ.ವಿ., ಕಾರ್ಯನಿರ್ವಾಹಕ ಅಧಿಕಾರಿ ಡಾ. ಶಿವಪ್ರಸಾದ್ ಪಟ್ಟಣಗೆರೆ, ಪುರುಷೋತ್ತಮ್ ಎಸ್. ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.