Home Shivamogga Sagara ಆನಂದಪುರಂ ಜಿ.ಪಂ. ಕ್ಷೇತ್ರದಿಂದ ಮಾಜಿ ಅಧ್ಯಕ್ಷ ಚಂದ್ರಕುಮಾರ್ ಕೊಲ್ಲಾಬೋವಿ ಸ್ಪರ್ಧೆಗೆ ಸಿದ್ಧತೆ..!!

ಆನಂದಪುರಂ ಜಿ.ಪಂ. ಕ್ಷೇತ್ರದಿಂದ ಮಾಜಿ ಅಧ್ಯಕ್ಷ ಚಂದ್ರಕುಮಾರ್ ಕೊಲ್ಲಾಬೋವಿ ಸ್ಪರ್ಧೆಗೆ ಸಿದ್ಧತೆ..!!

18
0

ಎಸ್‌ಸಿ ಮೀಸಲು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಚುರುಕು | ಪತ್ನಿ ಪದ್ಮಾವತಿ ಸ್ಪರ್ಧೆಯ ಬಗ್ಗೆಯೂ ಚರ್ಚೆ..!!

✒️..ಅಮಿತ್ ಆರ್ ಆನಂದಪುರ

ಸಾಗರ(ಆನಂದಪುರಂ): ಆನಂದಪುರಂ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಂದ್ರಕುಮಾರ್ ಕೊಲ್ಲಾಬೋವಿ ಅವರು ಮತ್ತೊಮ್ಮೆ ಚುನಾವಣಾ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿರುವುದು ಕ್ಷೇತ್ರದಲ್ಲಿ ರಾಜಕೀಯ ಕುತೂಹಲ ಮೂಡಿಸಿದೆ.

2007ರಲ್ಲಿ ಆನಂದಪುರಂ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಚಂದ್ರಕುಮಾರ್ ಕೊಲ್ಲಾಬೋವಿ ಅವರು, ಬಳಿಕ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಇದೀಗ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸುವ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದ್ದು, ಅವರ ಮುಂದಿನ ರಾಜಕೀಯ ನಡೆ ಕುತೂಹಲಕ್ಕೆ ಕಾರಣವಾಗಿದೆ.

ಆನಂದಪುರಂ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಅನುಸೂಚಿತ ಜಾತಿ (ಎಸ್‌ಸಿ) ಮೀಸಲಾತಿ ಘೋಷಣೆಯಾಗಿದ್ದು, ಆನಂದಪುರಂ ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ಅನುಸೂಚಿತ ಜಾತಿ ಮಹಿಳೆ ಮೀಸಲಾತಿ ನಿಗದಿಯಾಗಿದೆ. ಈ ಮೀಸಲಾತಿ ಹಿನ್ನೆಲೆಯಲ್ಲಿ ಕ್ಷೇತ್ರದ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ.

ಚಂದ್ರಕುಮಾರ್ ಕೊಲ್ಲಾಬೋವಿ ಅವರ ಪತ್ನಿ ಪದ್ಮಾವತಿ ಚಂದ್ರಕುಮಾರ್ ಅವರು 2013ರಲ್ಲಿ ಸಾಗರ ತಾಲ್ಲೂಕಿನ ತುಮರಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಿ, ಒಂದು ಅವಧಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಹೀಗಾಗಿ, ಚಂದ್ರಕುಮಾರ್ ಅವರು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸದಿದ್ದಲ್ಲಿ, ಅವರ ಪತ್ನಿ ಪದ್ಮಾವತಿ ಅವರು ಆನಂದಪುರಂ ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಈ ನಡುವೆ, ಕಳೆದ ಮೂರು ದಿನಗಳಿಂದ ಚಂದ್ರಕುಮಾರ್ ಕೊಲ್ಲಾಬೋವಿ ಅವರು ಆನಂದಪುರಂ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯ ಆನಂದಪುರಂ, ಆಚಾಪುರ, ಗೌತಮಪುರ ಹಾಗೂ ತ್ಯಾಗರ್ತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮತದಾರರು ಮತ್ತು ತಮ್ಮ ಹಿತೈಷಿಗಳನ್ನು ಭೇಟಿಯಾಗುತ್ತಿದ್ದಾರೆ ಎನ್ನಲಾಗಿದೆ.

ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಈ ಚಟುವಟಿಕೆಗಳು ಕ್ಷೇತ್ರದಲ್ಲಿ ಚುನಾವಣಾ ಸಿದ್ಧತೆಯ ಚರ್ಚೆಗೆ ಮತ್ತಷ್ಟು ವೇಗ ನೀಡಿವೆ. ಅಂತಿಮವಾಗಿ ಚಂದ್ರಕುಮಾರ್ ಅವರೇ ಸ್ಪರ್ಧಿಸುತ್ತಾರೆಯೇ ಅಥವಾ ಅವರ ಪತ್ನಿ ಪದ್ಮಾವತಿ ಅವರು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪ್ರವೇಶಿಸುತ್ತಾರೆಯೇ ಎಂಬುದು ಕೆಲ ಕುತೂಹಲಗಳಿಗೆ ಕಾರಣವಾಗಿದೆ.