ತುರುವೇಕೆರೆ: ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ
ತುರುವೇಕೆರೆ, : ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯಕ್ಕೂ ಮಹತ್ವ ನೀಡಬೇಕು. ಒತ್ತಡ ನಿವಾರಣೆ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಸಹಕಾರಿಯಾಗಿದೆ ಎಂದು ವೈದ್ಯ ಬ್ರಹ್ಮ ಎಂದೇ ಜನಪ್ರಿಯರಾಗಿರುವ ಡಾ. ಎ. ನಾಗರಾಜು ತಿಳಿಸಿದರು.
ಪಟ್ಟಣದ ವಿರಕ್ತಮಠ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ನಲ್ಲಿ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಸಹಯೋಗದಲ್ಲಿ, ಪ್ರಧಾನ ತನಿಖಾಧಿಕಾರಿ ಡಾ. ಆರತಿ ಜಗನ್ನಾಥನ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಯೋಗ ಆಧಾರಿತ ವಿಸ್ತರಣಾ ಸೇವೆ (YES) ಯೋಜನೆಯಡಿ ಗುರುವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ವರ್ಷದ ಘೋಷವಾಕ್ಯವಾದ ‘ಅನುಭವಗಳಿಗೆ ಕಿವಿಯಾಗೋಣ: ನೈಜ ಧ್ವನಿಗಳು, ನೈಜ ಬದಲಾವಣೆ’ ಎಂಬ ಆಶಯದ ಕುರಿತು ವಿವರಿಸಿದ ಅವರು, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ಅರಿವು ಬೆಳೆಸುವುದು ಅಗತ್ಯ ಎಂದರು.
ಕಾರ್ಯಕ್ರಮದ ಅಂಗವಾಗಿ ಡಾ. ಎ. ನಾಗರಾಜು ಅವರನ್ನು ನಿಮ್ಹಾನ್ಸ್ನ YES ಯೋಜನೆಯ ವತಿಯಿಂದ ಸನ್ಮಾನಿಸಲಾಯಿತು.

ಮಾನಸಿಕ ಆರೋಗ್ಯದ ಕುರಿತು ಜಾಗೃತಿ
ಯೋಜನೆಯ ಸಾಮಾಜಿಕ ಕಾರ್ಯಕರ್ತೆ ರೂಪಾ ಎಸ್. ಅವರು YES ಯೋಜನೆಯ ಉದ್ದೇಶ, ತುರುವೇಕೆರೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಹಾಗೂ ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಮಾನಸಿಕ ಆರೋಗ್ಯದ ಮಹತ್ವ, ಮಾನಸಿಕ ಸಮಸ್ಯೆಗಳ ಲಕ್ಷಣಗಳು ಮತ್ತು ಸಮಾಜದಲ್ಲಿರುವ ತಪ್ಪು ಕಲ್ಪನೆ ಹಾಗೂ ಕಳಂಕಗಳನ್ನು ಹೋಗಲಾಡಿಸುವ ಕುರಿತು ವಿವರಿಸಿದರು.
ಸಾಮಾಜಿಕ ಕಾರ್ಯಕರ್ತ ಅನಿಲ್ ಆರ್. ಅವರು ಮಾನಸಿಕ ಸಮಸ್ಯೆಗಳ ಲಕ್ಷಣಗಳು, ವ್ಯಸನ, ದೈಹಿಕ ಮತ್ತು ಸಾಮಾಜಿಕ ಒತ್ತಡ, ಒತ್ತಡ ನಿರ್ವಹಣೆ, ಸ್ವ-ಆರೈಕೆ ಹಾಗೂ ಭಾವನಾತ್ಮಕ ಬೆಂಬಲದ ಅಗತ್ಯವನ್ನು ತಿಳಿಸಿದರು.
ಯುವಜನರಲ್ಲಿ ಮಾದಕ ವಸ್ತುಗಳ ಕುರಿತು ಇರುವ ತಪ್ಪು ಕಲ್ಪನೆಗಳು ಮತ್ತು ಅರಿವಿನ ಕೊರತೆಯ ಬಗ್ಗೆ ಸಂವಾದ ನಡೆಸಿದ ಅವರು, ಮಾದಕ ವಸ್ತುಗಳ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಜೊತೆಗೆ ಶೈಕ್ಷಣಿಕ ಪ್ರಗತಿ, ಕುಟುಂಬ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೂ ಪರಿಣಾಮ ಬೀರುವುದರ ಕುರಿತು ಜಾಗೃತಿ ಮೂಡಿಸಿದರು.

ಯೋಗದಿಂದ ಮನಸ್ಸು-ದೇಹದ ಸಮತೋಲನ
ಡಾ. ವಿಭಾ ಎಸ್. ಗುಪ್ತ ಅವರು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಯೋಗದ ಪಾತ್ರ, ಅದರ ಪ್ರಯೋಜನಗಳು ಹಾಗೂ ಭಾವನೆಗಳ ನಿರ್ವಹಣೆಯ ಕುರಿತು ಮಾತನಾಡಿದರು. ಬಳಿಕ ಸಾರ್ವಜನಿಕರಿಗೆ ಯೋಗಾಭ್ಯಾಸ ಮಾಡಿಸಿ, ಯೋಗವು ಮನಸ್ಸು, ದೇಹ ಮತ್ತು ಆತ್ಮದ ಸಮತೋಲನಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಪಟ್ಟಣ ಪಂಚಾಯಿತಿಯ VRW ಮತ್ತು MRW ಸಿಬ್ಬಂದಿ, ಮಾಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ CHO ಮತ್ತು PHCO ಸಿಬ್ಬಂದಿ ಹಾಗೂ ತುರುವೇಕೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಪಾಲ್ಗೊಂಡಿದ್ದರು.











