ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ ಘೋಷವಾಕ್ಯ; ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನಗಳ ಪರಿಚಯ
ಶಿವಮೊಗ್ಗ: ಹವಾಮಾನ ವೈಪರೀತ್ಯ ಹಾಗೂ ಮಳೆಯ ಅಭಾವದಿಂದ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳ ನಡುವೆ ರೈತರ ಆದಾಯ ಹೆಚ್ಚಿಸುವುದು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಅಕ್ಟೋಬರ್ 30ರಿಂದ ನವೆಂಬರ್ 2ರವರೆಗೆ ನಾಲ್ಕು ದಿನಗಳ ಕಾಲ ಕೃಷಿ ಮತ್ತು ತೋಟಗಾರಿಕೆ ಮೇಳ–2026 ಆಯೋಜಿಸಲಾಗಿದೆ.
ನಗರದ ನವಿಲೆ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ‘ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ’ ಎಂಬ ಧ್ಯೇಯವಾಕ್ಯದೊಂದಿಗೆ ಮೇಳ ನಡೆಯಲಿದ್ದು, ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ವಿವಿಧ ಇಲಾಖೆಗಳು ಭಾಗವಹಿಸಲಿವೆ. ರೈತರಿಗೆ ಬರ ಪರಿಸ್ಥಿತಿಯನ್ನು ಎದುರಿಸುವ ವಿಧಾನಗಳು, ನೀರಿನ ಸಮರ್ಪಕ ಬಳಕೆ ಮತ್ತು ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡುವುದು ಮೇಳದ ಪ್ರಮುಖ ಉದ್ದೇಶವಾಗಿದೆ.
ಮೇಳದ ಅಂಗವಾಗಿ ಬರ ನಿರ್ವಹಣೆ, ನೀರು ಸಂರಕ್ಷಣೆ, ಹವಾಮಾನ ಆಧಾರಿತ ಕೃಷಿ, ಕಡಿಮೆ ನೀರು ಬೇಡುವ ಬೆಳೆಗಳ ತಳಿಗಳು ಹಾಗೂ ಮಣ್ಣಿನ ತೇವಾಂಶ ಸಂರಕ್ಷಣೆಗೆ ಸಂಬಂಧಿಸಿದಂತೆ ಮೂರು ದಿನಗಳ ವಿಚಾರಸಂಕಿರಣ ಆಯೋಜಿಸಲಾಗಿದೆ. ರೈತ ಮಹಿಳೆಯರು ಮತ್ತು ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ವಿಶೇಷ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಮೀನು ಕೃಷಿಯ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗಿದ್ದು, ಹೈನುಗಾರಿಕೆ ಮತ್ತು ಜಾನುವಾರುಗಳ ಪ್ರದರ್ಶನವೂ ಮೇಳದ ಪ್ರಮುಖ ಭಾಗವಾಗಿರಲಿದೆ.
ಹೊಸ ಬೆಳೆ ತಳಿಗಳ ಪ್ರಾತ್ಯಕ್ಷಿಕೆ, ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಗಳು, ಹೈಟೆಕ್ ತೋಟಗಾರಿಕೆ, ನಗರ ಕೃಷಿ, ತಾರಸಿ ಮತ್ತು ಲಂಬ ತೋಟಗಾರಿಕೆ, ಅಣಬೆ ಬೇಸಾಯ, ಸಿರಿಧಾನ್ಯಗಳ ಉತ್ಪಾದನೆ, ಗೋಡಂಬಿ ಕೃಷಿ ಹಾಗೂ ಮೌಲ್ಯವರ್ಧನೆಗೆ ಸಂಬಂಧಿಸಿದ ಪ್ರದರ್ಶನಗಳು ರೈತರ ಗಮನ ಸೆಳೆಯಲಿವೆ.
ಇದರೊಂದಿಗೆ ಕೃಷಿ ಯಂತ್ರೋಪಕರಣಗಳು, ಆಧುನಿಕ ಕೃಷಿ ಎಂಜಿನಿಯರಿಂಗ್ ತಂತ್ರಜ್ಞಾನಗಳು ಹಾಗೂ ರೋಬೋಟಿಕ್ಸ್ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ. ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಬಯಸುವ ರೈತರಿಗೆ, ಕೃಷಿ ವಿದ್ಯಾರ್ಥಿಗಳಿಗೆ ಹಾಗೂ ಕೃಷಿ ಉದ್ಯಮಿಗಳಿಗೆ ಮೇಳವು ಮಾಹಿತಿ ಮತ್ತು ಪ್ರಾತ್ಯಕ್ಷಿಕೆಗಳ ವೇದಿಕೆಯಾಗಲಿದೆ.











