Home Blog ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಕರವೇ ಸದಾ ಸಿದ್ಧ..!!

ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಕರವೇ ಸದಾ ಸಿದ್ಧ..!!

12
0

ಜಡೆ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ

ಸೊರಬ: ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಸಂಘಟಿತ ಹೋರಾಟ ಅಗತ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಎಸ್. ಮಂಜುನಾಥ್ ಹೇಳಿದರು.

ತಾಲೂಕಿನ ಜಡೆ ಗ್ರಾಮದ ದಸರಾ ಉತ್ಸವದ ವೇದಿಕೆಯಲ್ಲಿ ನಡೆದ ಕರವೇ ಜಡೆ ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ನಾಡು, ನುಡಿ ಹಾಗೂ ನೆಲ-ಜಲದ ವಿಚಾರದಲ್ಲಿ ಸಮಸ್ಯೆಗಳು ಎದುರಾದಾಗ ನಾರಾಯಣಗೌಡರ ನೇತೃತ್ವದ ಕರವೇ ಸದಾ ಹೋರಾಟಕ್ಕೆ ಸಿದ್ಧವಿರುತ್ತದೆ. ರಾಜ್ಯದಲ್ಲಿ ಜಾತ್ಯತೀತವಾಗಿ ಹಾಗೂ ಪಕ್ಷಾತೀತವಾಗಿ ಕನ್ನಡಪರ ಹೋರಾಟಗಳನ್ನು ನಡೆಸಿಕೊಂಡು ಬಂದಿರುವ ಸಂಘಟನೆಯನ್ನು ಗ್ರಾಮೀಣ ಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ಜವಾಬ್ದಾರಿ ನೂತನ ಪದಾಧಿಕಾರಿಗಳ ಮೇಲಿದೆ. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವುದರ ಜತೆಗೆ ಮಕ್ಕಳಲ್ಲಿ ಬಾಲ್ಯದಿಂದಲೇ ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸಬೇಕು. ಈ ಕಾರ್ಯದಲ್ಲಿ ಸಂಘಟನೆಯವರು ಮತ್ತು ಪೋಷಕರು ಕೈಜೋಡಿಸಬೇಕು ಎಂದು ತಿಳಿಸಿದರು.

ಒಗ್ಗಟ್ಟಿನಿಂದ ಗುರಿ ಸಾಧನೆ ಸಾಧ್ಯ

ಕರವೇ ಜಡೆ ಹೋಬಳಿ ಘಟಕದ ನೂತನ ಅಧ್ಯಕ್ಷ ಎಸ್‌ಆರ್‌ಎಸ್ ಮಂಜು ಮಾತನಾಡಿ, ಯಾವುದೇ ಗುರಿ ಸಾಧಿಸಲು ಸಂಘಟನೆ ಹಾಗೂ ಒಗ್ಗಟ್ಟು ಮುಖ್ಯ. ‘ಕೂಡಿ ಬಾಳಿದರೆ ಕೋಟಿ ಸುಖ’ ಎಂಬಂತೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ದೊಡ್ಡ ಸವಾಲುಗಳನ್ನೂ ಸುಲಭವಾಗಿ ಎದುರಿಸಬಹುದು. ಪೊರಕೆಯ ಕಡ್ಡಿಗಳು ಒಟ್ಟಾಗಿದ್ದಾಗ ಮಾತ್ರ ಸ್ವಚ್ಛತೆ ಸಾಧ್ಯವಾಗುವಂತೆ, ಸಂಘಟನೆಯ ಸದಸ್ಯರು ಒಗ್ಗಟ್ಟಿನಿಂದ ದುಡಿದಾಗ ಮಾತ್ರ ಉದ್ದೇಶ ಈಡೇರಿಸಲು ಸಾಧ್ಯ ಎಂದರು.

ಪದಾಧಿಕಾರಿಗಳ ನೇಮಕ

ಜಡೆ ಹೋಬಳಿ ಘಟಕದ ಗೌರವಾಧ್ಯಕ್ಷರಾಗಿ ಶಿವಾನಿ ಹನುಮಂತಪ್ಪ, ಅಧ್ಯಕ್ಷರಾಗಿ ಎಸ್‌ಆರ್‌ಎಸ್ ಮಂಜು, ಉಪಾಧ್ಯಕ್ಷರಾಗಿ ಪ್ರಮೋದ್ ಮಂಗಾಪುರ, ಶಶಾಂಕ್ ಪಾಟೀಲ್, ಎಸ್‌ಆರ್‌ಬಿ ಪ್ರಶಾಂತ್, ಇರ್ಷಾದ್ ಸಾಹೇಬ್ ಹಾಗೂ ರಂಗನಾಥ್ ಅಧಿಕಾರ ಸ್ವೀಕರಿಸಿದರು.

ಪ್ರಧಾನ ಕಾರ್ಯದರ್ಶಿಯಾಗಿ ದೊಡ್ಡಲಿಂಗೇಶ್ವರ ಯಡಗೊಪ್ಪ, ಕಾರ್ಯದರ್ಶಿಗಳಾಗಿ ಗುಡ್ಡಪ್ಪ ಚಗಟೂರು, ಇ. ಮಂಜುನಾಥ್ ಹಾಗೂ ಕುಮಾರ್, ಸಹಕಾರ್ಯದರ್ಶಿಗಳಾಗಿ ಶಂಕರ್ ಬಂಕಸಾಣ, ಪ್ರಶಾಂತ್ ಕೆರೆಹಳ್ಳಿ, ಪವನ್ ಜಡೆ ಹಾಗೂ ಶೋಭರಾಜ್, ಮಾಧ್ಯಮ ಕಾರ್ಯದರ್ಶಿಗಳಾಗಿ ಅನಿಲ್ ಮತ್ತು ಸುದೀಪ್, ಮಾಧ್ಯಮ ಸಹಕಾರ್ಯದರ್ಶಿಯಾಗಿ ಸದಾನಂದ ಶಾಂಭವಿ ಪದಗ್ರಹಣ ಮಾಡಿದರು.

ಬಳಿಕ ದಸರಾ ಉತ್ಸವದ ಅಂಗವಾಗಿ ಕರವೇ ಪ್ರಾಯೋಜಕತ್ವದಲ್ಲಿ ಸೊರಬದ ಡಿಡಿಎ ಡ್ಯಾನ್ಸ್ ಅಕಾಡೆಮಿ ಹಾಗೂ ಶಿಕಾರಿಪುರದ ನ್ಯೂ ಸ್ಟೆಪ್ ಡ್ಯಾನ್ಸ್ ಸ್ಟುಡಿಯೋ ವತಿಯಿಂದ ನೃತ್ಯ ಕಾರ್ಯಕ್ರಮ ನಡೆಯಿತು.

ಕರವೇ ತಾಲೂಕು ಘಟಕದ ಉಪಾಧ್ಯಕ್ಷರಾದ ಕೆ. ಹೊನ್ನಪ್ಪ, ಕೆ.ಪಿ. ಶ್ರೀಧರ್ ನೆಮ್ಮದಿ, ದೇವರಾಜ, ಎಸ್. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಶಕುನವಳ್ಳಿ, ಮಾಧ್ಯಮ ಕಾರ್ಯದರ್ಶಿ ಎಸ್.ಟಿ. ಸಂದೇಶ್, ಕಾರ್ಯದರ್ಶಿಗಳಾದ ಕೆ. ನಿಂಗರಾಜ, ಲಿಂಗರಾಜ ನೇರಲಗಿ, ಎಸ್.ಎಸ್. ಶಿವಯೋಗಿ ಸೇರಿದಂತೆ ಇತರರು ಇದ್ದರು.