Home Blog ಕೃಷಿ ಬದಲಾಗುತ್ತಿದೆ; ತಂತ್ರಜ್ಞಾನ–ನಾವೀನ್ಯತೆಯೇ ಮುಂದಿನ ದಾರಿ: ಡಾ. ತುಷಾರ್ ಬೆಹರಾ..!!

ಕೃಷಿ ಬದಲಾಗುತ್ತಿದೆ; ತಂತ್ರಜ್ಞಾನ–ನಾವೀನ್ಯತೆಯೇ ಮುಂದಿನ ದಾರಿ: ಡಾ. ತುಷಾರ್ ಬೆಹರಾ..!!

54
0

✒️..ಅಮಿತ್ ಆರ್ ಆನಂದಪುರ

ಶಿವಮೊಗ್ಗ/ಆನಂದಪುರ: ಕೃಷಿ ಕ್ಷೇತ್ರದ ಹವಾಮಾನ ವೈಪರೀತ್ಯ, ನೀರಿನ ಕೊರತೆ, ಮಣ್ಣಿನ ಸವಕಳಿ ಹಾಗೂ ಮಾರುಕಟ್ಟೆಯ ಏರಿಳಿತದಂತಹ ಸವಾಲುಗಳನ್ನು ಎದುರಿಸಲು ನೂತನ ತಂತ್ರಜ್ಞಾನ, ಕೌಶಲ್ಯ, ನಾವೀನ್ಯತೆ ಮತ್ತು ಜಂಟಿ ಸಹಕಾರಕ್ಕೆ ಆದ್ಯತೆ ನೀಡಬೇಕು ಎಂದು ಐಸಿಎಆರ್–ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರಿನ ನಿರ್ದೇಶಕ ಡಾ. ತುಷಾರ್ ಬೆಹರಾ ಹೇಳಿದರು.

ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸಂಶೋಧನೆಗಳು ಪ್ರಯೋಗಾಲಯಕ್ಕೆ ಸೀಮಿತವಾಗದೆ ‘ಪ್ರಯೋಗಾಲಯದಿಂದ ಭೂಮಿಗೆ’ (Lab to Land) ಪರಿಕಲ್ಪನೆಯಡಿ ರೈತರ ಹೊಲಗಳಿಗೆ ತಲುಪಬೇಕು ಎಂದರು.

ದೇಶದಲ್ಲಿ ಶೇ.42ರಿಂದ 43ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದು, GVAಗೆ ಕೃಷಿಯ ಕೊಡುಗೆ ಸುಮಾರು ಶೇ.18.4ರಷ್ಟಿದೆ. ಪ್ರಸ್ತುತ ತಲಾ ಕೃಷಿ ಜಮೀನಿನ ವಿಸ್ತೀರ್ಣ ಸುಮಾರು 0.11 ಹೆಕ್ಟೇರ್ ಇದ್ದು, 2047ರ ವೇಳೆಗೆ 0.06 ಹೆಕ್ಟೇರ್‌ಗೆ ಇಳಿಯುವ ಸಾಧ್ಯತೆ ಇದೆ. ಹೀಗಾಗಿ ಸೀಮಿತ ಭೂಮಿಯಲ್ಲಿ ಹೆಚ್ಚಿನ ಉತ್ಪಾದನೆ ಪಡೆಯಲು ಸುಸ್ಥಿರ ಹಾಗೂ ಸಂಪನ್ಮೂಲ-ಸಮರ್ಥ ಕೃಷಿ ಪದ್ಧತಿಗಳ ಅಗತ್ಯವಿದೆ ಎಂದು ಹೇಳಿದರು.

ಕೃಷಿ ಪದವೀಧರರು ಕೇವಲ ಉದ್ಯೋಗ ಹುಡುಕುವುದಕ್ಕೆ ಸೀಮಿತವಾಗದೆ ಕೃಷಿ ಉದ್ಯಮ ಮತ್ತು ಸ್ಟಾರ್ಟ್‌ಅಪ್‌ಗಳತ್ತ ಗಮನಹರಿಸಬೇಕು. ಐಸಿಎಆರ್, ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಸಿಎಸ್‌ಐಆರ್ ಸಂಸ್ಥೆಗಳ ನಡುವೆ ಸಂಶೋಧನಾ ಸಹಕಾರ ಹೆಚ್ಚಿಸಿ, ಹೆಚ್ಚಿನ MOUಗಳೊಂದಿಗೆ ಸ್ಪಷ್ಟ ಕಾರ್ಯಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ರೈತರ ಸಮಸ್ಯೆಗಳಿಗೆ ಸಂಶೋಧನೆ ಸ್ಪಂದಿಸಲಿ

ಕುಲಪತಿ ಡಾ. ಎಂ.ವಿ. ಧನಂಜಯ ಮಾತನಾಡಿ, AI, ಡ್ರೋನ್, IoT ಸಂವೇದಕಗಳು, ಸ್ವಯಂಚಾಲಿತ ಹನಿ ನೀರಾವರಿ ಹಾಗೂ ಹವಾಮಾನ ಮುನ್ಸೂಚನೆಯಂತಹ ತಂತ್ರಜ್ಞಾನಗಳನ್ನು ಕೃಷಿ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಬಳಸಬೇಕು ಎಂದರು. ಮಣ್ಣಿನ ಗುಣಮಟ್ಟ, ಬರ ನಿರೋಧಕ ತಳಿಗಳು, ಕೀಟ ನಿರ್ವಹಣೆ ಹಾಗೂ ಹೆಚ್ಚಿನ ಇಳುವರಿ ತಳಿಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯ ಆರಂಭವಾದ ಬಳಿಕ 3,914 ಪದವಿ, 1,000 ಸ್ನಾತಕೋತ್ತರ ಹಾಗೂ 132 ಪಿಎಚ್‌.ಡಿ. ಸೇರಿದಂತೆ 5,046 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಒಟ್ಟು 329 ಚಿನ್ನದ ಪದಕಗಳನ್ನು ನೀಡಲಾಗಿದ್ದು, 246 ವಿದ್ಯಾರ್ಥಿಗಳು ಗೌರವ ಪಡೆದಿದ್ದಾರೆ.

ವಿಶ್ವವಿದ್ಯಾಲಯವು 22 ಬೆಳೆ ತಳಿಗಳನ್ನು ಬಿಡುಗಡೆ ಮಾಡಿದ್ದು, ವಿವಿಧ ಕ್ಷೇತ್ರಗಳಲ್ಲಿ 133 ತಂತ್ರಜ್ಞಾನಗಳಲ್ಲಿ ಪ್ರಗತಿ ಸಾಧಿಸಿದೆ. ಇದುವರೆಗೆ 79,30,337 ಸಸಿಗಳು, 2,75,531 ಕೆ.ಜಿ. ಜೈವಿಕ ಗೊಬ್ಬರ ಹಾಗೂ 72,598 ಕ್ವಿಂಟಾಲ್ ವಿವಿಧ ಬೆಳೆಗಳ ಬೀಜೋತ್ಪಾದನೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ‘ಕೃಷಿ ಯಾನ’ ಹಾಗೂ ಸೆ.5–6ರಂದು ನಡೆದ ‘ಸಹ್ಯಾದ್ರಿ ಕೃಷಿ ಸಂತೆ’ ಮೂಲಕ ಕೃಷಿ ಜಾಗೃತಿ ಮತ್ತು ರೈತ ಉತ್ಪನ್ನಗಳ ಮಾರುಕಟ್ಟೆಗೆ ಉತ್ತೇಜನ ನೀಡಲಾಗಿದೆ. ಕೃಷಿ ಸಂತೆ ಸುಮಾರು ₹40ರಿಂದ ₹45 ಲಕ್ಷ ವಹಿವಾಟು ನಡೆಸಿದೆ ಎಂದು ತಿಳಿಸಲಾಯಿತು.

ಮುಂದಿನ ದಿನಗಳಲ್ಲಿ ‘ಸಹ್ಯಾದ್ರಿ ಕೃಷಿ ಒನ್’, ‘ಒಬ್ಬ ವಿಜ್ಞಾನಿ–ಸಾವಿರ ರೈತರು’, ಗ್ರೀನ್ ಬ್ಯಾಂಕ್ ಹಾಗೂ ಕೃಷಿ ತಂತ್ರಜ್ಞಾನ ಪರವಾನಗಿ ಸೇರಿದಂತೆ ಹಲವು ಹೊಸ ಯೋಜನೆಗಳಿಗೆ ವಿಶ್ವವಿದ್ಯಾಲಯ ಮುಂದಾಗಲಿದೆ ಎಂದು ಕುಲಪತಿ ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕುಲಸಚಿವರಾದ ಶಾಮರಾವ ಜಹಾಗೀರದಾರ, ಆಡಳಿತ ಮಂಡಳಿ ಸದಸ್ಯರಾದ ದೇವಿ ಕುಮಾರ್,ಶಶಾಂಕ್ , ಉತ್ಕೃಷ್ಟ ಶಿಕ್ಷಣ ತಜ್ಞ ಬಸವರಾಜ ನಾಯ್ಕ್, ಕೃಷಿ ಉದ್ಯಮದಾರ ಯೋಗೇಶ್ವರ್, ಡೀನ್ ಶ್ರೀನಿವಾಸ್, ಶಿಕ್ಷಣ ನಿರ್ದೇಶಕ ಹೆಮ್ಲಾ ನಾಯಕ್, ಸಂಶೋಧಕ ನಿರ್ದೇಶಕ ಶ್ರೀಧರ್, ಹಣಕಾಸು ನಿಯಂತ್ರಾಧಿಕಾರಿ ಪ್ರಿಯಾಂಕ, ಅವಿನಾಶ್ ಇನ್ನಿತರರು ಉಪಸ್ಥಿತರಿದ್ದರು.