ಸೊರಬ: ಸೊರಬದ ಕುಂಬತ್ತಿ ದುರ್ಗಾಂಬಾ ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ತನಿಖೆಯಲ್ಲಿ ಮೂರು ದೇವಸ್ಥಾನಗಳಲ್ಲಿ ಹುಂಡಿ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.
ಆಗಸ್ಟ್ 26ರಂದು ಕುಂಬತ್ತಿ ದುರ್ಗಾಂಬಾ ದೇವಸ್ಥಾನದ ಕಾಣಿಕೆ ಹುಂಡಿ ಕಳ್ಳತನವಾಗಿರುವ ಕುರಿತು ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.
ಸೊರಬ ಠಾಣೆ ಪಿಎಸ್ಐ ನವೀನ್ ಎಂ.ಎಚ್. ನೇತೃತ್ವದ ತನಿಖಾ ತಂಡ ಕಾರ್ಯಾಚರಣೆ ನಡೆಸಿ, ಶಿಕಾರಿಪುರ ತಾಲೂಕಿನ ಪುಣೆದಹಳ್ಳಿ ನಿವಾಸಿ ರಾಕೇಶ್ (28) ಎಂಬಾತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿ ರಾಕೇಶ್, ನವೀನ್ ಅಲಿಯಾಸ್ ದುರ್ಗ ಎಂಬಾತನೊಂದಿಗೆ ಸೇರಿ ಸೊರಬದ ಕುಂಬತ್ತಿ ದುರ್ಗಾಂಬಾ ದೇವಸ್ಥಾನ, ಜಂಬಾನಿಯ ಮಾರಿಕಾಂಬ ದೇವಸ್ಥಾನ ಹಾಗೂ ಶಿರಾಳಕೊಪ್ಪದ ಬಸನಂದಿಹಳ್ಳಿ ಚನ್ನಬಸವ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಕಳ್ಳತನ ಮಾಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.

ಪ್ರಕರಣದ ತನಿಖೆಯನ್ನು ಪಿಎಸ್ಐ ನವೀನ್ ಎಂ.ಎಚ್. ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ರಾಘವೇಂದ್ರ ಹಾಗೂ ವಿನಯ ಅವರನ್ನೊಳಗೊಂಡ ತಂಡ ನಡೆಸಿದೆ. ಸೊರಬ ಸಿಪಿಐ ಮಹಾಂತೇಶ್ ಕಂಬಿ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆದಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ. ಹಾಗೂ ಶಿಕಾರಿಪುರ ಉಪವಿಭಾಗದ ಡಿವೈಎಸ್ಪಿ ಕೇಶವ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಮಹಾಂತೇಶ್ ಕಂಬಿ ಮೇಲ್ವಿಚಾರಣೆಯಲ್ಲಿ ತನಿಖೆ ನಡೆದಿದೆ.











