Home Blog ವೈದ್ಯರ ವಸತಿಗೃಹದಲ್ಲಿ ಅಕ್ಕ ಕ್ಯಾಂಟೀನ್‌ಗೆ ವಿರೋಧ: ಬಿ.ಡಿ. ರವಿಕುಮಾರ್ ನೇತೃತ್ವದಲ್ಲಿ ಅಹೋರಾತ್ರಿ ಧರಣಿ..!!

ವೈದ್ಯರ ವಸತಿಗೃಹದಲ್ಲಿ ಅಕ್ಕ ಕ್ಯಾಂಟೀನ್‌ಗೆ ವಿರೋಧ: ಬಿ.ಡಿ. ರವಿಕುಮಾರ್ ನೇತೃತ್ವದಲ್ಲಿ ಅಹೋರಾತ್ರಿ ಧರಣಿ..!!

29
0

ಆಸ್ಪತ್ರೆಯ ಅವ್ಯವಸ್ಥೆ, 108 ಆಂಬುಲೆನ್ಸ್ ಕೊರತೆ ವಿರುದ್ಧ ರತ್ನಾಕರ ಹೊನಗೋಡು ಆಕ್ರೋಶ..!!

ಸಾಗರ,(ಆನಂದಪುರ): ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿರುವ ವೈದ್ಯರ ವಸತಿಗೃಹವನ್ನು ಅಕ್ಕ ಕ್ಯಾಂಟೀನ್ ಸ್ಥಾಪನೆಗಾಗಿ ಮರು ವಿನ್ಯಾಸಗೊಳಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ಪತ್ರಕರ್ತ ಬಿ.ಡಿ. ರವಿಕುಮಾರ್ ನೇತೃತ್ವದಲ್ಲಿ ಆಸ್ಪತ್ರೆಯ ಮುಂಭಾಗ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ.

ವೈದ್ಯರ ವಸತಿಗಾಗಿ ನಿರ್ಮಿಸಲಾಗಿರುವ ಕಟ್ಟಡವನ್ನು ಅಕ್ಕ ಕ್ಯಾಂಟೀನ್‌ಗೆ ಬಳಸಲು ಅವಕಾಶ ನೀಡಬಾರದು. ಸುಸ್ಥಿತಿಯಲ್ಲಿರುವ ಕಟ್ಟಡವನ್ನು ಮರು ವಿನ್ಯಾಸಗೊಳಿಸುವ ಮೊದಲು ಸಂಬಂಧಪಟ್ಟ ಇಲಾಖೆಗಳ ತಾಂತ್ರಿಕ ಹಾಗೂ ಆಡಳಿತಾತ್ಮಕ ನಿಯಮಗಳನ್ನು ಪಾಲಿಸಬೇಕು. ಆದರೆ, ಅಗತ್ಯ ನಿಯಮಗಳನ್ನು ಕಡೆಗಣಿಸಿ ಕಟ್ಟಡವನ್ನು ಕ್ಯಾಂಟೀನ್‌ಗಾಗಿ ಬದಲಾಯಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.

ವೈದ್ಯರ ವಸತಿ ಸಮಸ್ಯೆ ಎದುರಾಗುವ ಆತಂಕ

ಇತ್ತೀಚಿನ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಿಂದ ವೈದ್ಯರ ವರ್ಗಾವಣೆಯಾಗಿರುವುದನ್ನು ಉಲ್ಲೇಖಿಸಿದ ಪ್ರತಿಭಟನಾಕಾರರು, ಮುಂದಿನ ದಿನಗಳಲ್ಲಿ ತಜ್ಞ ವೈದ್ಯಾಧಿಕಾರಿಗಳ ನೇಮಕವಾದರೆ ವಸತಿ ಸೌಲಭ್ಯದ ಅಗತ್ಯ ಎದುರಾಗಲಿದೆ ಎಂದು ತಿಳಿಸಿದರು.

ವೈದ್ಯರ ವಸತಿಗಾಗಿ ನಿರ್ಮಿಸಿರುವ ಕಟ್ಟಡವನ್ನು ಅದರ ಮೂಲ ಉದ್ದೇಶಕ್ಕೆ ಬಳಸಬೇಕು. ಅಕ್ಕ ಕ್ಯಾಂಟೀನ್ ನಿರ್ಮಾಣಕ್ಕೆ 15 ಲಕ್ಷ ರೂ. ಅನುದಾನ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ, ಆಸ್ಪತ್ರೆಯ ಆವರಣದಲ್ಲಿರುವ ಸೂಕ್ತ ಜಾಗವನ್ನು ಗುರುತಿಸಿ ಕ್ಯಾಂಟೀನ್ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ವೈದ್ಯರ ವಸತಿಗೃಹವನ್ನು ಅಕ್ಕ ಕ್ಯಾಂಟೀನ್‌ಗೆ ಬಳಸಲು ಅನುಮತಿ ನೀಡಿರುವ ಕುರಿತು ಸಮಗ್ರ ತನಿಖೆ ನಡೆಸಬೇಕು. ಕಟ್ಟಡದ ಮರು ವಿನ್ಯಾಸಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ತಜ್ಞ ವೈದ್ಯರಿಲ್ಲದೆ ರೋಗಿಗಳ ಪರದಾಟ ರತ್ನಾಕರ ಹೊನಗೋಡು ಕಿಡಿ

ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಸಾಗರ ತಾಲೂಕಿನಲ್ಲಿಯೇ ವಿಶಾಲವಾದ ಹೋಬಳಿಗಳಲ್ಲಿ ಒಂದಾಗಿರುವ ಆನಂದಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳು ದೊರೆಯಬೇಕು. ಆದರೆ, ತಜ್ಞ ವೈದ್ಯರ ಕೊರತೆಯಿಂದ ಬಡ ರೋಗಿಗಳು ಪರದಾಡುವಂತಾಗಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಹಾಗೂ ತುರ್ತು ಚಿಕಿತ್ಸೆಗೂ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆನಂದಪುರ ವ್ಯಾಪ್ತಿಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿರುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಸ್ಥಳೀಯವಾಗಿ 108 ಆಂಬುಲೆನ್ಸ್ ಸೌಲಭ್ಯ ಇಲ್ಲದಿರುವುದು ತುರ್ತು ಚಿಕಿತ್ಸೆಗೆ ತೊಂದರೆಯಾಗಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ರಕ್ಷಾ ಸಮಿತಿಯ 20 ಲಕ್ಷ ರೂ. ವೆಚ್ಚದ ಲೆಕ್ಕ ಕೇಳಿದ ಪ್ರತಿಭಟನಾಕಾರರು

ಆಸ್ಪತ್ರೆಯ ರಕ್ಷಾ ಸಮಿತಿಯಲ್ಲಿದ್ದ 20 ಲಕ್ಷ ರೂ. ಹಣವನ್ನು ಯಾವ ಉದ್ದೇಶಗಳಿಗೆ ಖರ್ಚು ಮಾಡಲಾಗಿದೆ ಎಂಬುದರ ಕುರಿತು ಸೂಕ್ತ ದಾಖಲೆಗಳನ್ನು ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವೈದ್ಯರ ವಸತಿಗೃಹವನ್ನು ಮೂಲ ಉದ್ದೇಶಕ್ಕೆ ಬಳಸಬೇಕು, ಆನಂದಪುರಕ್ಕೆ 108 ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಾಗಿವೆ.

ಜಿಲ್ಲಾ ವೈದ್ಯಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳಿಗೆ ಸ್ಪಷ್ಟ ಉತ್ತರ ನೀಡಿ ಸೂಕ್ತ ಕ್ರಮ ಕೈಗೊಳ್ಳುವವರೆಗೆ ಅಹೋರಾತ್ರಿ ಧರಣಿ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.

ಪಲಾಯನ ಗೈದ ತಾಲೂಕು ವೈದ್ಯಾಧಿಕಾರಿ ರವೀಂದ್ರ?

ಪ್ರತಿಭಟನಾ ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ರವೀಂದ್ರ ಆಗಮಿಸಿದಾಗ, ವೈದ್ಯರ ವಸತಿಗೃಹದ ಮರು ವಿನ್ಯಾಸ, 108 ಆಂಬುಲೆನ್ಸ್ ಸೌಲಭ್ಯದ ಕೊರತೆ ಹಾಗೂ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ, ತಮ್ಮ ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಾಲೂಕು ವೈದ್ಯಾಧಿಕಾರಿ ತಿಳಿಸಿದರು. ಆದರೆ, ಜಿಲ್ಲಾ ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಪ್ರತಿಭಟನಾ ಸ್ಥಳದಲ್ಲಿಯೇ ಇರಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

ಬಳಿಕ ತಾಲೂಕು ವೈದ್ಯಾಧಿಕಾರಿ ಆಸ್ಪತ್ರೆಯ ಮತ್ತೊಂದು ಬಾಗಿಲಿನ ಮೂಲಕ ಹೊರಹೋದರು ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದರಿಂದ ಪ್ರತಿಭಟನಾಕಾರರ ಅಸಮಾಧಾನ ಮತ್ತಷ್ಟು ಹೆಚ್ಚಾಯಿತು.

ವಿವಿಧ ಸಂಘಟನೆಗಳಿಂದ ಬೆಂಬಲ

ಪ್ರತಿಭಟನೆಗೆ ಆನಂದಪುರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಮೋಹನ್ ಮತ್ತು ಗುರುರಾಜ್, ದಲಿತ ಸಂಘರ್ಷ ಸಮಿತಿಯ ರೇವಪ್ಪ ಹೊಸಕೊಪ್ಪ, ಪಿಎಲ್‌ಡಿ ಬ್ಯಾಂಕ್‌ನ ನಿರ್ದೇಶಕರು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.

ವೈದ್ಯರ ವಸತಿಗೃಹದ ಮೂಲ ಉದ್ದೇಶವನ್ನು ಉಳಿಸುವುದು, ಆರೋಗ್ಯ ಕೇಂದ್ರದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವುದು ಹಾಗೂ 108 ಆಂಬುಲೆನ್ಸ್ ವ್ಯವಸ್ಥೆ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.