ಸಾಗರ (ಆನಂದಪುರ): ಅಕ್ರಮಗಳನ್ನು ಬಯಲಿಗೆಳೆದರೆ ಬಾಯಿಗೆ ಬಂದಂತೆ ಹೋರಾಟಗಾರರಿಗೆ ಹೇಳುತ್ತೀರಾ? ಇದು ಸರಿಯಲ್ಲ, ಹುಷಾರ್ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಕಿಡಿಕಾರಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆನಂದಪುರ ಆಸ್ಪತ್ರೆ ಆವರಣದಲ್ಲಿರುವ ವಸತಿ ನಿಲಯವನ್ನು ಅಕ್ಕ ಕ್ಯಾಂಟೀನ್ ಮಾಡುವುದನ್ನು ವಿರೋಧಿಸಿ ಪತ್ರಕರ್ತ ಬಿ.ಡಿ. ರವಿಕುಮಾರ್ ಹಾಗೂ ಪಕ್ಷಾತೀತವಾಗಿ ನಾವೆಲ್ಲರೂ ಹೋರಾಟ ಮಾಡಿದ್ದೆವು.
ನಮ್ಮ ಹೋರಾಟ ಅಕ್ಕ ಕ್ಯಾಂಟೀನ್ ನಿರ್ಮಾಣ ಮಾಡುವುದಕ್ಕೆ ಅಲ್ಲವಾಗಿದ್ದು, ಅದನ್ನು ವಸತಿ ನಿಲಯದಲ್ಲಿ ನಿರ್ಮಿಸುತ್ತಿರುವುದು ಸರಿಯಿಲ್ಲ. ಆಸ್ಪತ್ರೆ ಆವರಣದಲ್ಲಿ ವಿಶಾಲವಾದ ಜಾಗವಿದೆ. ಅಲ್ಲಿ ನಿರ್ಮಿಸಿ ಎಂದು ಹೇಳಿದ್ದೆವು. ಆದರೆ, ಕಾಟಾಚಾರಕ್ಕೆ ಕ್ಯಾಂಟೀನ್ ಅನ್ನು 2 ಲಕ್ಷದಲ್ಲಿ ನಿರ್ಮಿಸಿ, 15 ಲಕ್ಷ ಬಿಲ್ ಮಾಡಿಕೊಳ್ಳುತ್ತಿದ್ದರು. ಇದು ಎಷ್ಟರ ಮಟ್ಟಿಗೆ ಸರಿ ಎಂದು ಅಧಿಕಾರಿಗಳ ಗಮನಕ್ಕೆ ತರಲು ಹೋರಾಟ ಮಾಡಿದ್ದೆವು. ಆದರೆ, ಕಾಂಗ್ರೆಸ್ ವಿರುದ್ಧವಾಗಲಿ, ಶಾಸಕರ ವಿರುದ್ಧವಾಗಲಿ ನಮ್ಮ ಹೋರಾಟ ಇರಲಿಲ್ಲ. ಇವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ನಂತರ ಬಂದು ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಣಿಗೆ ಎತ್ತಿ ಕ್ಯಾಂಟೀನ್ ಮಾಡುತ್ತೇವೆ

15 ಲಕ್ಷದಲ್ಲಿ ಬೀಡಾ ಅಂಗಡಿ ಕಟ್ಟಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಇದೇ ಸರ್ಕಾರದಲ್ಲಿ ಒಂದೂವರೆ ಲಕ್ಷದಲ್ಲಿ ಜನತಾ ಮನೆ ಕಟ್ಟಲಾಗುತ್ತದೆ. 15 ಲಕ್ಷದಲ್ಲಿ ಅಕ್ಕ ಕ್ಯಾಂಟೀನ್ ಕಟ್ಟಲಾಗುವುದಿಲ್ಲವೇ? ಶಾಸಕರು ಅಭಿವೃದ್ಧಿಯ ಹೊಳೆ ಹರಿಸುತ್ತಿದ್ದಾರೆ ಅಂತೀರಲ್ಲ, ಅವರಿಗೆ ಐದು-ಹತ್ತು ಲಕ್ಷ ಕೊಡಲು ಯೋಗ್ಯತೆ ಇಲ್ಲವೇ ಎಂದು ಪ್ರಶ್ನಿಸಿದರು.
ಒಂದು ವೇಳೆ ನಿಮ್ಮ ಕೈಯಲ್ಲಿ ಆಗುವುದಿಲ್ಲವೆಂದರೆ ಹೇಳಿ. 15 ಲಕ್ಷಕ್ಕಿಂತ ಮೀರಿ ಖರ್ಚಾದರೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ನಮ್ಮೂರಿನಲ್ಲಿ ಕ್ಯಾಂಟೀನ್ ಪ್ರಾರಂಭ ಮಾಡುತ್ತೇವೆ ಎಂದರು.
ಪತ್ರಕರ್ತ ಬಿ.ಡಿ. ರವಿಕುಮಾರ್ ಅವರು ಇವರ ಅಕ್ರಮ ಹಾಗೂ ಲೂಟಿಯನ್ನು ವಿರೋಧಿಸಿದಾಗ, ಅವರೇ ಸರಿಯಿಲ್ಲ, ನಕಲಿ ಪತ್ರಕರ್ತರು ಎಂದು ಬಿಂಬಿಸಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.
ಹತ್ತಾರು ಎಕರೆ ಅರಣ್ಯ ಭೂಮಿಯನ್ನು ಹೊಡೆದುಕೊಂಡಿದ್ದಾರಲ್ಲ, ಅಲ್ಲಿರುವ ಮರಗಳನ್ನು ಏನು ಮಾಡಿದರು? ದಟ್ಟವಾದ ಕಾಡಿನಲ್ಲಿ ಕಲ್ಲು ಕ್ವಾರಿ ಮಾಡಿದ್ದಾರಲ್ಲ, ಆ ಮರಗಳು ಎಲ್ಲಿ ಹೋದವು? ನಿಮ್ಮ ಅಕ್ರಮಗಳನ್ನು ಬಯಲಿಗೆಳೆಯುವವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತೀರಾ? ಇದು ಸರಿಯಲ್ಲ ಎಂದು ಆರೋಪಿಸಿದರು.
ಇಬ್ಬರು ಫ್ರಾಡ್ಗಳಿದ್ದಾರೆ. ಕಾಗೋಡು ತಿಮ್ಮಪ್ಪ ಅವರಿಗೆ ಸನ್ಮಾನ ಮಾಡುತ್ತೇವೆ ಎಂದು ಕೋಟ್ಯಂತರ ರೂಪಾಯಿ ಹಣ ಸಂಗ್ರಹಣೆ ಮಾಡಿ, 250 ಜನರನ್ನು ಸೇರಿಸಲು ಆಗದೆ ಹಣವನ್ನು ಲೂಟಿ ಹೊಡೆದ ಅಯೋಗ್ಯರು ಇಂದಿಗೂ ಲೆಕ್ಕ ಕೊಟ್ಟಿಲ್ಲ ಎಂದರು.
ಇವರೊಂದಿಗೆ ಬರಬೇಕಾದರೆ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತರು ಯೋಚನೆ ಮಾಡಿ ಬನ್ನಿ. ನಾವು ಹೇಳಿದರೆ ಬರುವುದಿಲ್ಲ ಎಂದು ಸ್ವತಃ ಶಾಸಕರಿಂದಲೇ ನಿಮಗೆ ಫೋನ್ ಮಾಡಿಸುತ್ತಾರೆ, ನಿಮಗೆ ಹೇಳಿಸುತ್ತಾರೆ. ಅಂತಹ ಫ್ರಾಡ್ಗಳು ನಿಮ್ಮನ್ನು ಲೂಟಿ ಮಾಡಲು ಬಳಸಿಕೊಳ್ಳುತ್ತಾರೆ.
ಒಬ್ಬ ಮಣ್ಣು, ಮರಳು ಎಂದು ಮಾರುವವನು, ಆನಂದಪುರದಲ್ಲಿ ನಾಲ್ಕು ಎಕರೆ ಜಾಗವನ್ನು ಇತ್ತೀಚೆಗೆ, 20 ಕೋಟಿ ಬೆಲೆಬಾಳುವ ಜಾಗವನ್ನು ರಾತ್ರೋರಾತ್ರಿ ಸ್ವಚ್ಛಗೊಳಿಸಿ ಹೊಡೆದುಕೊಳ್ಳುವ ಸಂಚನ್ನು ಹೂಡಿದ್ದರು ಎಂದರು.

‘ನನ್ನ ಹಣದ ಮೂಲ ತೋರಿಸುತ್ತೇನೆ, ನಿಮ್ಮದನ್ನೂ ಬಹಿರಂಗಪಡಿಸಿ
ಹೋರಾಟಕ್ಕೆ 50 ಸಾವಿರ ಖರ್ಚು ಮಾಡಿದ್ದಾರಂತೆ ಎಂದು ಕೇಳಿದ್ದಾರೆ. ನಾನು ನಿಷ್ಠೆಯಿಂದ ಕೃಷಿ ಮಾಡಿ ಹಣ ಸಂಪಾದಿಸಿ ಸಾರ್ವಜನಿಕರಿಗಾಗಿ ಖರ್ಚು ಮಾಡುತ್ತೇನೆ. ಹಾಗಾಗಿ, ತಾಲೂಕು ಪಂಚಾಯಿತಿಯಲ್ಲಿ ಪ್ರಚಾರ ಮಾಡದೆ ನಾನು ಗೆದ್ದಿದ್ದೆ.
ನನ್ನನ್ನು ಕೇಳುವವರು ಹಾಗೂ ನಿಮ್ಮ ಶಾಸಕರ ಹಣದ ಮೂಲವನ್ನು ಹೇಳಿ. ಇದೇ ಶಾಸಕರು ನಾಲ್ಕು ವರ್ಷದ ಹಿಂದೆ ಹಣವಿಲ್ಲದೆ ಕಣ್ಣೀರು ಹಾಕುತ್ತಿದ್ದರು. ಆದರೆ, ಈಗ ಆಸ್ತಿ ಖರೀದಿಸಲು, 700 ಗಣಪತಿಗಳಿಗೆ ಹಣ ಕೊಡಲು ಎಲ್ಲಿಂದ ಹಣ ಬಂತು? ನನ್ನ ಹಣದ ಮೂಲವನ್ನು ತೋರಿಸುತ್ತೇನೆ, ಬನ್ನಿ. ನಿಮ್ಮೆಲ್ಲರ ಹಾಗೆ ಲೂಟಿ ಹೊಡೆದು ಹಣ ಮಾಡಿಲ್ಲ, ಪ್ರಾಮಾಣಿಕತೆಯಿಂದ ಹಣ ಮಾಡಿದ್ದೇನೆ ಎಂದರು.
ಇರುವ ವಸತಿ ನಿಲಯದಲ್ಲಿ ಅಕ್ಕ ಕ್ಯಾಂಟೀನ್ ನಿರ್ಮಿಸಿದರೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ರೇವಪ್ಪ ಹೊಸಕೊಪ್ಪ ಮಾತನಾಡಿ, ಪಕ್ಷಾತೀತವಾಗಿ ಹೋರಾಟ ಮಾಡಿದ್ದಕ್ಕೆ ರತ್ನಾಕರ ಹೊನಗೋಡು ಅವರ ಬಗ್ಗೆ ಏಕವಚನದಲ್ಲಿ ಸೋಮಶೇಖರ್ ಲಾವಿಗೆರೆ ಮಾತನಾಡಿರುವುದು ಸರಿಯಲ್ಲ. ವೈಯಕ್ತಿಕವಾಗಿ ಈ ರೀತಿ ರತ್ನಾಕರ ಹೊನಗೋಡು ಅವರಿಗೆ ತೇಜೋವಧೆ ಮಾಡಿದರೆ, ಮುಂದಿನ ದಿನಗಳಲ್ಲಿ ಆನಂದಪುರದಲ್ಲಿ ನೀವು ತಲೆಯೆತ್ತಿ ನಡೆಯಲು ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಮಾತನಾಡಿ, ಅಕ್ಕ ಕ್ಯಾಂಟೀನ್ ಅನ್ನು ಆನಂದಪುರ ಆಸ್ಪತ್ರೆಯ ಮುಂಭಾಗದಲ್ಲಿ ರಸ್ತೆ ಬದಿಯಲ್ಲಿ ನಿರ್ಮಿಸುವುದರಿಂದ ಅಲ್ಲಿ ವ್ಯವಹಾರ ಮಾಡುವವರಿಗೂ, ಸಾರ್ವಜನಿಕರಿಗೂ ಹಾಗೂ ರೋಗಿಗಳಿಗೂ ತುಂಬಾ ಅನುಕೂಲವಾಗುತ್ತದೆ. ಆದರೆ, ಈಗಿರುವ ಕಟ್ಟಡವನ್ನು ಒಡೆದು ಅಕ್ಕ ಕ್ಯಾಂಟೀನ್ ನಿರ್ಮಿಸುವುದು ತಪ್ಪು ಎಂದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪ ಗೌಡ್ರು, ಮಾಜಿ ಗ್ರಾ.ಪಂ, ಗುರುರಾಜ್ ಹಾಗೂ ಪ್ರಮುಖರಾದ ಮೋಹನ್ ಕುಮಾರ್, ಚೌಡಪ್ಪ,ರೇವಣಯ್ಯ, ದೇವರಾಜ್ ಉಪಸ್ಥಿತರಿದ್ದರು.











